ನವಲಗುಂದ: ಅನ್ನಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರ ಬಡವರಿಗೆ ಪ್ರತಿ ತಿಂಗಳು ಉಚಿತವಾಗಿ ಪಡಿತರ ವಿತರಿಸುತ್ತಿದೆ. ಆದರೆ ಉಚಿತವಾಗಿ ಪಡೆದ ಅಕ್ಕಿಯನ್ನು ಕೆಲವರು ಕೆ.ಜಿ. ಗೆ 10 ರೂಪಾಯಿಯಂತೆ ಕಾಳಸಂತೆಕೋರರಿಗೆ ಮಾರುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಖರೀದಿಸುವ ಜಾಲವೊಂದಿದ್ದು, ಯಾವುದೇ ಭಯವಿಲ್ಲದೆ ವಾಹನದಲ್ಲಿ ಬಂದು ಅಕ್ಕಿಯನ್ನು ಒಂದೆಡೆಗೆ ಸಂಗ್ರಹಿಸಿಟ್ಟು ಸಾಗಿಸುತ್ತಿದ್ದಾರೆ ಎನ್ನಲಾಗಿದೆ.
ಸರ್ಕಾರ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬಡವರಿಗಾಗಿ ಉಚಿತ ಅಕ್ಕಿ ನೀಡುತ್ತಿದೆ. ಕಾರ್ಡ್ ದಾರರು ಖಾಸಗಿಯವರಿಗೆ 10 ರೂ. ಮಾರಾಟ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಯ ವಾಹನಗಳು ರಾಜಾರೋಷವಾಗಿ ಬಂದು ಭಯವಿಲ್ಲದೆ ಅಕ್ರಮವಾಗಿ ಅಕ್ಕಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಕುರಿತು ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಇದು ಹೀಗೆ ಮುಂದುವರೆದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.