ಹುಬ್ಬಳ್ಳಿ : ಸ್ಥಳದ ಅಭಾವದಿಂದ ಹಾಗೂ ಸರಿಯಾದ ಆಸನದ ವ್ಯವಸ್ಥೆ ಇಲ್ಲದಿರುವುದರಿಂದ ಈ ಬಾರಿ ಮಹಾನಗರ ಪಾಲಿಕೆಯ ನೂತನ ಮೇಯರ್, ಡೆಪ್ಯುಟಿ ಮೇಯರ್ ಆಯ್ಕೆ ಪ್ರಕ್ರಿಯೆ ಪಾಲಿಕೆ ಕಚೇರಿ ಆವರಣದ ಆಚೆ ನಡೆಯುವುದು ಖಚಿತವಾಗಿದೆ. ಆದರೆ, ಚುನಾಯಿತ ಪ್ರತಿನಿಧಿಗಳು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆ ಬಳಿಕ ಪಾಲಿಕೆಯ ನೂತನ ಸದಸ್ಯರು ಕುಳಿತುಕೊಳ್ಳಲು ಸ್ಥಳಾವಕಾಶದ ಅಭಾವ ಉಂಟಾಗಿದೆ. ಹೀಗಾಗಿ, ಸಾಂಸ್ಕೃತಿಕ ಭವನ, ಕನ್ನಡ ಭವನವನ್ನ ತಾತ್ಕಾಲಿಕ ಬಳಕೆಗೆ ಚರ್ಚೆ ನಡೆಸಲಾಗಿದೆ. ವಾರ್ಡ್ ಮರುವಿಂಗಡಣೆ ಬಳಿಕ ವಾರ್ಡ್ಗಳ ಸಂಖ್ಯೆ 67ರಿಂದ 82ಕ್ಕೆ ಹೆಚ್ಚಳವಾಗಿದೆ.
ಹೀಗಾಗಿ, ಇಷ್ಟೊಂದು ಸಂಖ್ಯೆಯ ಕಾರ್ಪೊರೇಟರ್ಗಳು, ನಾಲ್ವರು ಶಾಸಕರು, ಒಬ್ಬ ಎಂಎಲ್‌ಸಿ, ಸಂಸದರು ಹಾಗೂ ಹಲವಾರು ಅಧಿಕಾರಿಗಳು ಮತ್ತು ಮಾಧ್ಯಮದವರು ಸೇರಿ ನೂರಾರು ಜನರಿಗೆ ಪಾಲಿಕೆಯ ಸಭಾಭವನದಲ್ಲಿ ಆಸನ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗುತ್ತದೆ. ಹಾಗಾಗಿ, ಪಾಲಿಕೆಯ ಪ್ರಧಾನ ಕಚೇರಿ ಆವರಣದ ಹೊರಗಡೆಯ ವಿಶಾಲವಾದ ಕಟ್ಟಡದಲ್ಲಿ ಸಭೆ ನಡೆಸುವುದು ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಕಾಟನ್ ಮಾರ್ಕೆಟ್ನಲ್ಲಿರುವ ಸಾಂಸ್ಕೃತಿಕ ಭವನ ಇಲ್ಲವೇ ಅಶೋಕ ನಗರದಲ್ಲಿನ ಕನ್ನಡ ಭವನವನ್ನು ಪಾಲಿಕೆಯ ತಾತ್ಕಾಲಿಕ ಸಾಮಾನ್ಯ ಸಭೆಗೆ ಸಭಾಂಗಣವನ್ನಾಗಿ ಬಳಸಿಕೊಳ್ಳಲು ಅಧಿಕಾರಿಗಳು ಗಂಭೀರವಾಗಿ ಚರ್ಚಿಸಿದ್ದಾರೆ. ಇದರಲ್ಲಿ ಕಾರು, ಬೈಕ್‌ಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ಸಾರಿಗೆ ವ್ಯವಸ್ಥೆ, ಸುರಕ್ಷತೆ ಸೇರಿದಂತೆ ಎಲ್ಲ ಆಯಾಮಗಳ ಕುರಿತಾಗಿ ಅಧಿಕಾರಿಗಳು ನಡೆಸಿದ ಚರ್ಚೆಯಲ್ಲಿ ಸಾಂಸ್ಕೃತಿಕ ಭವನವೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಆದರೆ, ಇದಕ್ಕೆ ನೂತನವಾಗಿ ಆಯ್ಕೆಯಾದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ನೂತನ ಪಾಲಿಕೆ ಸದಸ್ಯರು ಪಾಲಿಕೆಯಲ್ಲಿ ಕುಳಿತು ಚರ್ಚೆ ನಡೆಸಲು ಆಗಿದ್ದಾರೋ ಅಥವಾ ಸಮುದಾಯ ಭವನದಲ್ಲಿ ಚರ್ಚೆ ನಡೆಸಲು ಆಗಿದ್ದಾರೋ ಎಂದು ಪ್ರಶ್ನಿಸುತ್ತಿದ್ದಾರೆ.
ಪಾಲಿಕೆಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಚುನಾಯಿತ ಪ್ರತಿನಿಧಿಗಳಿಲ್ಲದ ಪಾಲಿಕೆಗೆ ಪ್ರತಿನಿಧಿಗಳು ಆಯ್ಕೆಯಾಗಿ ಬಂದರೂ ಆಸನದ ವ್ಯವಸ್ಥೆ ಕಲ್ಪಿಸುವುದೇ ತಲೆನೋವಾಗಿದೆ. ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸದಿದ್ದರೆ ಸರ್ಕಾರ ಹಾಗೂ ಅಧಿಕಾರಿಗಳ ಲೆಕ್ಕಾಚಾರಗಳು ಬುಡಮೇಲಾಗುವ ಸಂಭವ ಹೆಚ್ಚಿದೆ.
ಓದಿ: ತಾಳಗುಪ್ಪ-ಹೊನ್ನಾವರ ಮಾರ್ಗ ಆರಂಭ ; ಆದ್ಯತೆ ಮೇಲೆ ರೈಲ್ವೆ ಯೋಜನೆಗಳ ಪರಿಗಣನೆ - ಸಚಿವ ವಿ ಸೋಮಣ್ಣ