ಹುಬ್ಬಳ್ಳಿ : ಧಾರವಾಡ ಜಿಲ್ಲೆ ಸಾಹಿತ್ಯದ ತವರೂರು. ಇಲ್ಲಿ ಇಬ್ಬರೂ ಗಂಧರ್ವರು ಹುಟ್ಟಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಕೂಡ ನಮ್ಮವರನ್ನು ಗುರುತಿಸುವ ಹಾಗೂ ಅವರ ಸಾಧನೆಯನ್ನು ಸ್ಮರಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು.
ನಗರದಲ್ಲಿಂದು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆಗೊಳಿಸಿ ಕನ್ನಡದಲ್ಲೇ ಬಾಷಣ ಆರಂಭಿಸಿದ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಮಾತನಾಡುವುದು ನಮ್ಮ ಸೌಭಾಗ್ಯ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನನ್ನ ಗುರು. ಪಾರ್ಲಿಮೆಂಟ್ ನಡಾವಳಿ ಬಗ್ಗೆ ಜೋಶಿ ನನಗೆ ಕಲಿಸಿಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಪ್ರತಿಯೊಂದು ಹೆಜ್ಜೆ, ಭಾಷಣ ಮಾಡೋದನ್ನು ಪ್ರಹ್ಲಾದ ಜೋಶಿ ಕಲಿಸಿದ್ದಾರೆ. ಅಧಿಕಾರ, ಸ್ಥಾನ ಬಂದನಂತರ ಮನುಷ್ಯ ಬದಲಾಗುತ್ತಾನೆ. ಆದರೆ ವಿರೋಧ ಪಕ್ಷದ ನಾಯಕರೂ ಪ್ರಹ್ಲಾದ ಜೋಶಿ ಅವರನ್ನು ಗೌರವಿಸುತ್ತಾರೆ ಎಂದರು.
ಸಂಗೀತಕ್ಕಿರುವ ಶಕ್ತಿಯನ್ನು ಸವಾಯಿ ಗಂಧರ್ವರು ಬ್ರಿಟೀಷರಿಗೆ ಪರಿಚಯಿಸಿದ್ದರು. ಕಲೆ, ಸಂಸ್ಕೃತಿ, ಶಿಕ್ಷಣದಿಂದ ಸವಾಯಿ ಗಂಧರ್ವರು ಪರಿಪೂರ್ಣರು. ಡಾ.ಗಂಗೂಬಾಯಿ ಹಾನಗಲ್ ಹಾಗೂ ಪಂ. ಭೀಮಸೇನ ಜೋಶಿಯಂತಹ ಶಿಷ್ಯರನ್ನು ನಾಡಿಗೆ ಕೊಟ್ಟಿದ್ದೇ ಸವಾಯಿ ಗಂಧರ್ವರು ಎಂದು ಅವರು ಅಭಿನಂದನೆ ಸಲ್ಲಿಸಿದರು.
ಸವಾಯಿ ಗಂಧರ್ವ ಸಾಧನೆ ಸ್ಮರಿಸಿದ ಜೋಶಿ: ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಮಾತ್ರವಲ್ಲದೇ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಯನ್ನು ಸವಾಯಿ ಗಂಧರ್ವರು ನೀಡಿದ್ದಾರೆ. ಸವಾಯಿ ಗಂಧರ್ವರು ಹಿಂದೂಸ್ತಾನಿ ಸಂಗೀತದ ಕಂಪನ್ನು ಹರಡಿಸುವಲ್ಲಿ ಬಹಳಷ್ಟು ಪರಿಶ್ರಮ ಪಟ್ಟವರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಅವರನ್ನು ಸಂಗೀತಕ್ಕಾಗಿ ಸಿದ್ದಪಡಿಸಿದವರು. ಸಂಗೀತಕ್ಕೆ ಭದ್ರ ಬುನಾದಿಯನ್ನು ಹಾಕಿದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಬಹಳಷ್ಟು ಜನ ಈಗಾ ಜಾತಿ ಜಾತಿಯಲ್ಲಿ ಬಡದಾಡುತ್ತಿದ್ದಾರೆ. ಆದರೆ, ಸವಾಯಿ ಗಂಧರ್ವರನ್ನು ಮೈಸೂರು ಆಸ್ಥಾನದ ಪಂಡಿತರಾದ ಅಬ್ದುಲ್ ಕರೀಮ್ ಖಾನ್ ಕರೆದುಕೊಂಡು ಹೋಗಿ ಸಂಗೀತ ಕಲಿಸಿದ್ದರು. ಅಬ್ದುಲ್ ಕರೀಮ್ ಜಾನ್ ಅವರ ಗರಡಿ ಮನೆಯಲ್ಲಿ ಬೆಳೆದವರು ಸವಾಯಿ ಗಂಧರ್ವರು. ಈ ಮಣ್ಣು ಸಂಗೀತಕ್ಕಾಗಿ ಬಹಳಷ್ಟು ಮಹಾಪುರುಷರನ್ನು ನೀಡಿದೆ. ಇವತ್ತು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ನಮ್ಮ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಇದನ್ನೂ ಓದಿ : ನಾಳೆ ಹುಬ್ಬಳ್ಳಿ ರೈಲು ನಿಲ್ದಾಣದ ಮೂರನೇ ಮುಖ್ಯ ದ್ವಾರ ಲೋಕಾರ್ಪಣೆ: ನಿಜಾಮುದ್ದೀನ್ ರೈಲಿಗೆ ಹಸಿರು ನಿಶಾನೆ