ಹುಬ್ಬಳ್ಳಿ: ಗಣೇಶೋತ್ಸವ ವೇಳೆ ಸೌಂಡ್ ಸಿಸ್ಟಮ್ ಹಚ್ಚಲು ಅನುಮತಿ ನೀಡುವಂತೆ ಒತ್ತಾಯಿಸಿ, ಹುಬ್ಬಳ್ಳಿಯ ರಾಮನಗರದ ಸರ್ವ ಧರ್ಮ ಸೇವಾ ಸಮಿತಿ, ಶ್ರೀ ಗಜಾನನ ಉತ್ಸವ ಸಮಿತಿಯಿಂದ ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆವರೆಗೆ ಪಾದಯಾತ್ರೆ ನಡೆಸಲಾಯಿತು.
ಶ್ರೀ ಗಜಾನನ ಉತ್ಸವದ ಮುಖಂಡ ಸಂತೋಷ ಛಲವಾದಿ ನೇತೃತ್ವದಲ್ಲಿ ನೂರಾರು ಯುವಕರು ಕೇಶ್ವಾಪುರ ಸರ್ಕಲ್, ರಮೇಶ ಭವನ ಮಾರ್ಗವಾಗಿ ಭವಾನಿನ ಗರದಲ್ಲಿರುವ ಕೇಂದ್ರ ಸಚಿವರ ಮನೆಯವರೆಗೆ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸ ಮಾಡಿದರು. ಆ ಬಳಿಕ ಐದು ಜನರಿಗೆ ಮಾತ್ರ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.
ಇನ್ನು, ಮೆರವಣಿಗೆ ದಾರಿಯುದ್ದಕ್ಕೂ ಬೇಕೇ ಬೇಕು ಡಿಜೆ ಬೇಕು, ಬೇಕೇ ಬೇಕು ಸಿಸ್ಟಮ್ ಬೇಕು. ಧಿಕ್ಕಾರ ಧಿಕ್ಕಾರ ಸರ್ಕಾರಕ್ಕೆ ಧಿಕ್ಕಾರ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೋಲೋ ಶ್ರೀ ಗಜಾನನ ಮಹಾರಾಜ ಕಿ ಜೈ, ಲಂಬೋಧರ ಮಹಾರಾಜ ಕಿ ಜೈ ಎಂಬ ಘೋಷಣೆಗಳು ಪಾದಯಾತ್ರೆಯಲ್ಲಿ ಮೊಳಗಿದವು.
ಕಳೆದ ಎರಡು ವರ್ಷಗಳಿಂದ ಕೊರೋನಾದಿಂದಾಗಿ ಗಣೇಶೋತ್ಸವವನ್ನು ಸರಳವಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ. ಆದರೆ ಈ ಬಾರಿ ಆದರೂ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಬಹುದೆಂದು ನಾವು ನಂಬಿದ್ದೆವು. ಈ ಹಿಂದೆ ರಾಮನಗರ ಭಾಗದಲ್ಲಿ 11 ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ ಈ ಸಲ ಎಲ್ಲರೂ ಒಟ್ಟಾಗಿ ಒಂದೇ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದಾಗ್ಯೂ ಸರ್ಕಾರ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ವಿಡಿಯೋ: 20 ಸಾವಿರ ಪ್ಲಾಸ್ಟಿಕ್ ಬಾಟಲ್ಗಳಿಂದ ತಯಾರಾದ ಗಣೇಶ
ಹಬ್ಬದಲ್ಲಿ ಡಿಜೆ ಸಿಸ್ಟಮ್ ಹಚ್ಚುವುದಕ್ಕೆ ಅನುಮತಿ ನೀಡದಿರುವುದು ಖಂಡನೀಯ. ಕೂಡಲೇ ಸರ್ಕಾರ ಗಣೇಶ ಚತುರ್ಥಿ ಆಚರಣೆಗೆ ಯಾವುದೇ ತರಹದ ನಿರ್ಬಂಧ ಹಾಕದೇ ಡಿಜೆ ಹಚ್ಚಲು ಅನುಮತಿ ಕೊಡುವಂತೆ ಪ್ರತಿಭಟನಾಕಾರರು ಕೇಂದ್ರ ಸಚಿವ ಜೋಶಿ ಅವರಿಗೆ ಒತ್ತಾಯಿಸಿದರು.
ಆದ್ರೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಬಳಕೆಗೆ ನಿರ್ಬಂಧ ಇರುವ ಹಿನ್ನೆಲೆ ಜಿಲ್ಲಾಡಳಿತ ಡಿಜೆ ಬಳಕೆಗೆ ಅನುಮತಿ ನಿರಾಕರಿಸಿದೆ ಎಂದು ತಿಳಿದುಬಂದಿದೆ.