ಹುಬ್ಬಳ್ಳಿ: ಹಳೇ ವೈಷಮ್ಯ ಹಿನ್ನೆಲೆ ಸಂತೋಷ ಮುರಗೋಡ ಎಂಬಾತನನ್ನು ಶನಿವಾರ ತಡರಾತ್ರಿ ರೌಡಿಶೀಟರ್ ಶಿವಾನಂದ ನಾಯಕ್ ಎಂಬಾತ ಚಾಕುವಿನಿಂದ ಇರಿದಿದ್ದರು ಎನ್ನಲಾಗ್ತಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸಂತೋಷ ಮುರಗೋಡ ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ರೆ ಆರೋಪಿಯನ್ನು ತಮಗೆ ಒಪ್ಪಿಸಬೇಕು ಎಂದು ಆಗ್ರಹಿಸಿ, ಜಂಗ್ಲಿಪೇಟ್ ನಿವಾಸಿಗಳು ಹಾಗೂ ಸಂತೋಷ ಸಂಬಂಧಿಗಳು ಕಸಬಾಪೇಟ ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸುವ ಯತ್ನ ಮಾಡಿದರು. ಆದ್ರೆ ಪ್ರತಿಭಟನಾಕಾರರು ತಳ್ಳಾಟ ನೂಕಾಟ ನಡೆಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪರಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇದನ್ನೂ ಓದಿ: ಹುಬ್ಬಳ್ಳಿ: ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ
ಆರೋಪಿ ಶಿವಾನಂದ ಈ ಹಿಂದೆ ಜಂಗ್ಲಿಪೇಟೆಯಲ್ಲಿ ಪೆಟ್ರೋಲ್ ಕಳ್ಳತನ ಮಾಡಿದ್ದರು. ಈ ಬಗ್ಗೆ ಮೃತ ಸಂತೋಷ್ ಆರೋಪಿ ಶಿವಾನಂದಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗ್ತಿದೆ. ಆಗ ಆರೋಪಿ ಶಿವಾನಂದ ಸಂತೋಷ್ ಮೇಲೆ ಸಿಟ್ಟು ಇಟ್ಟುಕೊಂಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದರಂತೆ. ಈ ಬಗ್ಗೆ ಕಸಬಾಪೇಟೆ ಪೊಲೀಸರಿಗೆ ಮೊದಲೇ ಆರೋಪಿ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರ ನಿರ್ಲ್ಕಕ್ಷ್ಯವೂ ಘಟನೆಗೆ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.