ಹುಬ್ಬಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸತತ 14ನೇ ಬಾರಿಗೆ ಧಾರವಾಡ ಜಿಲ್ಲೆಗೆ ನಂಬರ್ ಒನ್ ಸ್ಥಾನವನ್ನು ಪಡೆದಿರುವ ಹುಬ್ಬಳ್ಳಿ ಭೈರಿದೇವರಕೊಪ್ಪದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಮೃದ್ಧ ಶೆಟ್ಟಿ 2023ರ ಸಿಇಟಿಯಲ್ಲಿ ಕಮಾಲ್ ಮಾಡಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಇಂಜಿನಿಯರಿಂಗ್ ವಿಭಾಗದಲ್ಲಿ ಸಮೃದ್ಧ ಶೆಟ್ಟಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಐಐಟಿ ಮೇನ್ಸ್‌ನಲ್ಲೂ ಇವರು ದೇಶಕ್ಕೆ 31ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದರು. ಸಮೃದ್ದ ಉಡುಪಿಯ ಮೂಲದವರಾಗಿದ್ದು, ಪುಣೆಯಲ್ಲಿ ವಾಸವಾಗಿದ್ದಾರೆ.
₹1 ಲಕ್ಷ ಚೆಕ್ ನೀಡಿದ ಸಂಸ್ಥೆ: ಉತ್ತರ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿ ಕಾಲೇಜಿಗೆ ಕೀರ್ತಿ ತಂದ ಸಮೃದ್ದ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಚೌಗಲಾ, ಚೇರಮನ್ ಶ್ರೀದೇವಿ ಚೌಗಲಾ, ನಿರ್ದೇಶಕರಾದ ಗಂಗಾಧರ ಕಮಡೊಳ್ಳಿ, ರಮೇಶ ಭಂಡಿವಾಡ, ಪ್ರಾಂಶುಪಾಲ ಡಾ.ಮುಳಗುಂದ ವಿದ್ಯಾನಿಕೇತನ ಕಾಲೇಜು ಆಡಳಿತ ಮಂಡಳಿಯಿಂದ ಸನ್ಮಾನಿಸಿದರು. ಜತೆಗೆ 1 ಲಕ್ಷ ರೂಪಾಯಿ ಚೆಕ್ ನೀಡಿದ ಕಾಲೇಜಿನ ಅಧ್ಯಕ್ಷ ಅನಿಲ್ ಚೌಗ್ಲಾ, ವಿದ್ಯಾರ್ಥಿಯ ಇಂಜಿನಿಯರಿಂಗ್ ಫೀಸ್ ಭರಿಸೋದಾಗಿ ಭರವಸೆ ನೀಡಿದರು.
ರಾಂಕ್ ಬಂದಿರೋದಕ್ಕೆ ಸಮೃದ್ಧ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ಸತತ ಅಭ್ಯಾಸ, ಏಕಾಗ್ರತೆಯ ಫಲವಾಗಿ ಸಾಧನೆ ಮಾಡಿದ್ದೇನೆ. ಮೊದಲ ರ್‍ಯಾಂಕ್ ನಿರೀಕ್ಷೆಯಲ್ಲಿದ್ದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಅಭ್ಯಾಸ ಮುಂದುವರೆಸುತ್ತೇನೆ ಎಂದರು. ಇನ್ನು ಮಗನ ಸಾಧನೆ ಬಗ್ಗೆ ತಂದೆ ತಾಯಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರೇ ಮೇಲುಗೈ: ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ನಡೆದ ಸಿಇಟಿ ಪರೀಕ್ಷಾ ಫಲಿತಾಂಶ ನಿನ್ನೆ(ಜೂ.15) ಪ್ರಕಟಗೊಂಡಿದೆ. ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಫಲಿತಾಂಶ ಪ್ರಕಟಿಸಿದ್ದರು. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದರು
ಇಂಜಿನಿಯರಿಂಗ್ ವಿಭಾಗದ ಟಾಪರ್ಸ್: ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಪರೀಕ್ಷೆಯ ಟಾಪ್ 10 ನಲ್ಲಿ ಬೆಂಗಳರಿನ 8 ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ. ಇನ್ನು ಧಾರವಾಡ ಹಾಗೂ ಬಳ್ಳಾರಿಗೆ ಒಂದೊಂದು ರ‍್ಯಾಂಕ್ ಬಂದಿದೆ. ಹಾಗೆಯೇ ಯೋಗ ಮತ್ತು ನ್ಯಾಚುರೋಪತಿ ಕೋರ್ಸನಲ್ಲಿ ಬೆಂಗಳೂರಿಗೆ 5 ರ‍್ಯಾಂಕ್ ಬಂದಿದ್ದು, ಮಂಗಳೂರಿಗೆ 2, ಹುಬ್ಬಳ್ಳಿ 1, ರಾಜಸ್ಥಾನ -1 , ದಾವಣಗೆರೆಯ ಓರ್ವ ವಿದ್ಯಾರ್ಥಿ ರ‍್ಯಾಂಕ್ ಪಡೆದಿದ್ದಾರೆ.
ಇಂಜಿನಿಯರಿಂಗ್ ಕೋರ್ಸ್ ಪ್ರವೇಶಾತಿ ಪರೀಕ್ಷೆಯಲ್ಲಿ ಟಾಪರ್ಸ್:
- ವಿಜ್ಞೇಶ್ ನಟರಾಜ್ ಕುಮಾರ್ (ಉತ್ತರಹಳ್ಳಿ ಕುಮಾರನ್ಸ್ ಕಾಲೇಜ್) - ಶೇ.97.889%
- ಅರ್ಜುನ್ ಕೃಷ್ಣಸ್ವಾಮಿ (ಆರ್.ವಿ ಪಿ.ಯು. ಕಾಲೇಜ್ ಜಯನಗರ)- ಶೇ.- 97.5%
- ಸಮೃದ್ಧ ಶೆಟ್ಟಿ (ವಿದ್ಯಾನಿಕೇತನ್ ಸೈನ್ಸ್ ಕಾಲೇಜ್ ಹುಬ್ಬಳ್ಳಿ) ಶೇ. 97.167%
ಅರ್ಹತೆ ಪಡೆದ ವಿದ್ಯಾರ್ಥಿಗಳು: ಕೃಷಿ ವಿಜ್ಞಾನ ಕ್ಕೆ 1,64,187, ಪಶುಸಂಗೋಪನೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 2,06,161, ಬಿ ಫಾರ್ಮ್ 2,06,191, ಡಿ ಫಾರ್ಮ್ 2,06,340, ನರ್ಸಿಂಗ್ ಕೋರ್ಸ್ ಗೆ 1,66,808 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ: CET result: ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ, ಇಂಜಿನಿಯರಿಂಗ್ನಲ್ಲಿ ವಿಘ್ನೇಶ್ಗೆ ಮೊದಲ ರ‍್ಯಾಂಕ್