ಧಾರವಾಡ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಬೆಳವಣಿಗೆ ಬಗ್ಗೆ ಜನರೇ ಗಂಭೀರವಾಗಿ ವಿಚಾರ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟು ನಾಚಿಕೆಗೇಡಿಗಳು ಇವತ್ತು ಅಧಿಕಾರದಲ್ಲಿದ್ದಾರೆ, ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಇವರೆಲ್ಲ ಪಕ್ಷಾಂತರ ಮಾಡಿದರು. ಹಣ ಮತ್ತು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದರು. ತಿರುಗಿ ರಾಜೀನಾಮೆ ಕೊಟ್ಟು ಆರಿಸಿ ಬರ್ತಾರೆ. ಆ ಬಳಿಕ ಬೇಕಾದ ಹುದ್ದೆ ತಗೋತಾರೆ ಎಂದು ಹರಿಹಾಯ್ದರು.
ಎಂಎಲ್ಎ, ಮಿನಿಸ್ಟರ್ ಆಗಿ ಇರೋಕೆ ಇವರೆಲ್ಲ ಯೋಗ್ಯ ಇದಾರಾ? ಅಧಿಕಾರ ಪಡೆಯುವಾಗ ಮಾಡುವ ಶಪಥಕ್ಕೂ, ಮಾಡುವ ಕೆಲಸಕ್ಕೂ ಅಂತರ ಇದೆ, ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಜನರೇ ಇವರಿಗೆಲ್ಲ ಬುದ್ದಿ ಕಲಿಸಬೇಕು. ಪ್ರಜಾಪ್ರಭುತ್ವ ಉಳಿಸುವ ಕೊನೆಯ ಜವಾಬ್ದಾರಿ ನಮ್ಮ ಮೇಲಿದೆ. 1977ರಲ್ಲಿ ದೇಶದ ಜನತೆ ಒಮ್ಮೆ ಪಾಠ ಕಲಿಸಿದ್ದಾರೆ ಎಂದರು.
ಓದಿ : ಸಿಡಿ ಹಿಂದೆ ಬಿಜೆಪಿ ನಾಯಕರ ಕೈವಾಡನೂ ಇರಬಹುದು: ಯತ್ನಾಳ್ ಬಾಂಬ್!
ಮೂರು ಕೃಷಿ ಕಾಯ್ದೆ, ವಿದ್ಯುತ್ ಮಸೂದೆ, ರಾಜ್ಯ ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದಾಗಬೇಕು ಎಂದು ಆಗ್ರಹಿಸಿ ಮಾ. 22ರಂದು ವಿಧಾನ ಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಒಟ್ಟು 23 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹೋರಾಟ ಮಾಡಲಾಗುತ್ತಿದೆ. ದೆಹಲಿ ರೈತ ಹೋರಾಟದ ನಾಯಕರಾದ ರಾಕೇಶಸಿಂಗ್ ಟಿಕಾಯತ್, ಡಾ. ದರ್ಶನ್ ಪಾಲ್ ಇತರರು ಬೆಂಗಳೂರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.