ಹುಬ್ಬಳ್ಳಿ: ಗಾಯನ ನಿಲ್ಲಿಸಿದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡದೊಂದಿಗೆ ಯಾವ ರೀತಿಯ ನಂಟು ಬೆಸೆದುಕೊಂಡಿತ್ತೋ ಅದೇ ರೀತಿ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಎಸ್ಪಿಬಿ ಅವರಿಗೂ ಅವಿನಾಭಾವ ಸಂಬಂಧವಿತ್ತು.
ಹೌದು, ಮೂಲತಃ ಕನ್ನಡಿಗ ಆಗದೇ ಇದ್ದರೂ ಕೂಡ ಕನ್ನಡದ ಅಭಿಮಾನ ಕನ್ನಡದಲ್ಲಿನ ಸಂಗೀತ ಪ್ರೇಮದಿಂದ ಕನ್ನಡಿಗರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದಾರೆ. ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಸುಬ್ರಹ್ಮಣ್ಯಂ ಅವರು ನನ್ನ ಮುಂದಿನ ಜನ್ಮ ಒಂದಿದ್ದರೆ ನಾನು ಕನ್ನಡಿಗನಾಗಿ ಹುಟ್ಟುತ್ತೇನೆ ಎಂದು ಹೇಳಿದ ಮಾತು ಹುಬ್ಬಳ್ಳಿಯ ಜನತೆಯ ಹೃದಯ ಸ್ಪರ್ಶಿಸಿತ್ತು. ಸುಮಾರು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ. ಸದಾ ಲವಲವಿಕೆಯ ವ್ಯಕ್ತಿತ್ವ. ಎಂತಹವರನ್ನು ಕೂಡ ಮೂಕ ವಿಸ್ಮಿತರನ್ನಾಗಿಸುವ ಸಂಗೀತ ಮಾಂತ್ರಿಕ ಎಸ್ಪಿಬಿ ಅವರಿಗೆ ಹುಬ್ಬಳ್ಳಿಯ ಸೊಬಗು ನಿಜಕ್ಕೂ ಅಚ್ಚುಮೆಚ್ಚಾಗಿತ್ತು.
ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಸುಬ್ರಹ್ಮಣ್ಯಂ ಅವರು ಎಂ.ಎಂ.ಜೋಶಿ ಅವರ ಕುಟುಂಬದ ಜೊತೆ ಕಳೆದ ಕ್ಷಣಗಳನ್ನು ಡಾ. ಶ್ರೀನಿವಾಸ ಜೋಶಿ ಮೆಲುಕು ಹಾಕಿದ್ದಾರೆ. ಕಾರ್ಯಕ್ರಮ ಮುಗಿದ ಮೇಲೆ ಗಂಗೂಬಾಯಿ ಹಾನಗಲ್ ವಾಸವಾಗಿದ್ದ ಮನೆಗೆ ಭೇಟಿ ನೀಡಿ ಖುಷಿ ಹಂಚಿಕೊಂಡಿದ್ದರು.