ಹುಬ್ಬಳ್ಳಿ: ರಾಜ್ಯದಲ್ಲಿ ನರೇಗಾ ಯೋಜನೆಯಡಿ ಇದುವರೆಗೂ ಒಂಬತ್ತು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸ್ಥರು ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣಿಗರಿಂದ ಸರ್ಕಾರದ ನಿಯಮ ಸರಿಯಾಗಿ ಪಾಲನೆಯಾಗುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಸಡಿಲಿಕೆಯಿಂದ ಹೊರ ರಾಜ್ಯಗಳಿಂದ ಆಗಮಿಸುವವರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ, ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ ಎಂದರು. ಅನ್ಯ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಹಲವಾರು ಜನ ಆಗಮಿಸುವ ಅಪೇಕ್ಷೆ ಹೊಂದಿದ್ದು, ಸರ್ಕಾರ ಅಂತವರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಕೊರೊನ ತಡೆಗಟ್ಟುವ ಕಾರ್ಯ ಮಾಡುತ್ತಿದೆ ಎಂದರು.
ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಗ್ರಾಮೀಣ ಪ್ರದೇಶಗಳ ಜನರಿಂದ ನರೇಗಾ ಯೋಜನೆ ಯಶಸ್ವಿ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಜನತೆಯ ಶಿಸ್ತಿನಿಂದಲೇ ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.