ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಮಾಜಿ ಸಿಎಂ ಜಗದೀಶ್ ಕಳೆದ 40 ವರ್ಷಗಳಿಂದ ಕಟ್ಟಿ ಬೆಳೆಸಿದ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದಂತೆ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ಸಿಕ್ಕಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತಂತ್ರ ರೂಪಿಸಿದೆ. ಇದರ ಬೆನ್ನಲ್ಲೆ ಜಗದೀಶ್ ಶೆಟ್ಟರ್ ಸೋಲಿಸಲು ಆರ್ಎಸ್ಎಸ್ ರಣತಂತ್ರ ರೂಪಿಸುತ್ತಿದೆ. ಹುಬ್ಬಳ್ಳಿಗೆ ಭೇಟಿ ನೀಡಿದ ಆರ್ಎಸ್ಎಸ್ನ 50 ಜನರ ತಂಡವು ಶೆಟ್ಟರ್ ಅವರನ್ನು ಹಣಿಯಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಶೆಟ್ಟರ್ ಮನೆಗೆ ನಿನ್ನೆ ಸುರ್ಜೆವಾಲಾ ಭೇಟಿ: ಹುಬ್ಬಳ್ಳಿಯ ಕೇಶ್ವಾಪೂರದ ಮಧುರಾ ಕಾಲೋನಿಯ ಶೆಟ್ಟರ್ ಮನೆಗೆ ನಿನ್ನೆ ಸುರ್ಜೆವಾಲಾ ಭೇಟಿ ನೀಡಿದ್ದರು. ಈ ವೇಳೆ ಲಿಂಗಾಯತ ಮತಗಳನ್ನು ಸೆಳೆಯಲು ಶೆಟ್ಟರ್ಗೆ ಟಾಸ್ಕ್ ನೀಡಿದ್ದಾರೆ ಎನ್ನಲಾಗಿದೆ. ಲಿಂಗಾಯತ ನಾಯಕರಿಗೆ ಬಿಜೆಪಿ ಮೋಸ ಮಾಡಿದೆ ಎಂಬುದನ್ನು ಬಿಂಬಿಸುವಂತೆ ಸುರ್ಜೆವಾಲಾ ಸೂಚನೆ ನೀಡಿದ್ದಾರೆ. ಕೇವಲ ನಿಮ್ಮ ಕ್ಷೇತ್ರವಲ್ಲದೇ ಸುತ್ತ ಮುತ್ತಲಿನ ಕ್ಷೇತ್ರದಲ್ಲೂ ನೀವು ತಂತ್ರ ಹೆಣೆಯಬೇಕು ಎಂದು ಸುರ್ಜೆವಾಲಾ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರೆ.
'ಕೈ' ಬಾವುಟ ಹಾರಿಸಲು ತಂತ್ರ: ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶೆಟ್ಟರ್ಗೆ ಸ್ಥಾನ ಸಿಕ್ಕ ಬೆನ್ನಲ್ಲೆ ಶೆಟ್ಟರ್ ಮನೆಗೆ ಸುರ್ಜೇವಾಲಾ ಭೇಟಿ ನೀಡಿದ್ದು, ಇದಕ್ಕೆ ಭಾರೀ ಪುಷ್ಟಿ ಕೊಟ್ಟಿದೆ. ಲಿಂಗಾಯತ ಮತಗಳು ಹೆಚ್ಚಿರೋ ಕಡೆ ಶೆಟ್ಟರ್ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದಿರೋ ಸುರ್ಜೇವಾಲಾ ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರೋ ಸೆಂಟ್ರಲ್ ಕ್ಷೇತ್ರದಲ್ಲಿ ಈ ಬಾರಿ 'ಕೈ' ಬಾವುಟ ಹಾರಿಸಲು ತಂತ್ರ ರೂಪಿಸಿದೆ.
ಕಾಂಗ್ರೆಸ್ನಲಿದ್ದ ಬಣಗಳ ಬಡಿದಾಟವನ್ನು ಶೆಟ್ಟರ್ ಮನೆಯಲ್ಲಿಯೇ ಸುರ್ಜೆವಾಲಾ ಶಮನ ಮಾಡಿ ಹೋಗಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾದ ಲಕ್ಷ್ಮೀ ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ, ಅನಿಲ್ ಕುಮಾರ್ ಪಾಟೀಲ್ ನಡುವೆ ಬಣಗಳ ಬಡಿದಾಟ ಇತ್ತು. ಇಬ್ಬರನ್ನು ಶೆಟ್ಟರ್ ಮನೆಗೆ ಕರೆದು ಭಿನ್ನಮತ ಶಮನ ಮಾಡಿದ್ದಾರೆ. ಇಬ್ಬರಿಗೂ ಶೆಟ್ಟರ್ ಪರ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.
ಶೆಟ್ಟರ್ ಸೋಲಿಸಲು ರಣತಂತ್ರ ಹೆಣೆದ ಆರ್ಎಸ್ಎಸ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಲಿಂಗಾಯತ ಮತ ಬ್ಯಾಂಕಿಗೆ ಕೈ ಹಾಕುತ್ತಿದ್ದಾರೆ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಶೆಟ್ಟರ್ ಸೋಲಿಸಲು ಭಾರೀ ರಣತಂತ್ರ ರೂಪಿಸಲಾಗುತ್ತಿದೆ.
ಚುನಾವಣಾ ಅಖಾಡಕ್ಕೆ ಇಳಿದ ಆರ್ಎಸ್ಎಸ್ನ 50 ಜನರ ತಂಡ: ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ 50 ಜನರ ತಂಡ ಚುನಾವಣಾ ಅಖಾಡಕ್ಕೆ ಇಳಿದಿದೆ. ಕಟ್ಟಾ ಆರ್ಎಸ್ಎಸ್ ಹಿನ್ನೆಲೆಯುಳ್ಳವನ್ನು ಶೆಟ್ಟರ್ ಸೋಲಿಸಲು ಆರ್ಎಸ್ಎಸ್ ತಂಡ ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿದ್ದು, ಈಗಾಗಲೇ ಭಾರೀ ಮಟ್ಟದ ಕಾರ್ಯಾಚರಣೆ ನಡೆಸುತ್ತಿದೆ. ನಾಗಪುರದಿಂದ 50 ಜನರ ತಂಡ ಶೆಟ್ಟರ್ ಸೋಲಿಸಲು ಪಣತೊಟ್ಟಿದೆ. ಈಗಾಗಲೇ ಹುಬ್ಬಳ್ಳಿಗೆ ಬಂದಿಳಿದ ಕೆಲ ಆರ್ಎಸ್ಎಸ್ ಪ್ರಮುಖರು, ಶೆಟ್ಟರ್ ಹಣಿಯಲು ರಣತಂತ್ರ ಹೆಣೆಯುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟ ನಾಗಪುರ ತಂಡ: ಈಗಾಗಲೇ ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟ ನಾಗಪುರ ತಂಡದ ಸದಸ್ಯರು ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲು ಭೇಟಿಯಾಗಿದ್ದಾರೆ. ಶೆಟ್ಟರ್ ಅವರ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಗುಪ್ತವಾಗಿ ಶೆಟ್ಟರ್ ಚಲನವಲನದ ಮೇಲೆ ಕಣ್ಣಿಟ್ಟಿರುವ ತಂಡ ಆರು ಸಲ ಗೆದ್ದಿರೋ ಜಗದೀಶ್ ಶೆಟ್ಟರ್ ಮಣಿಸಲು ಭಾರೀ ಯೋಜನೆಯೊಂದನ್ನು ಮಾಡುತ್ತಿದೆ. ಟಿಕೆಟ್ ತಪ್ಪಿಸಿದ್ದು, ಬಿ.ಎಲ್.ಸಂತೋಷ್ ಎಂದು ಶೆಟ್ಟರ್ ಹೇಳಿದ ಬಳಿಕ ಬಿಜೆಪಿ ಸಂಘ ಪರಿವಾರ ಅಲರ್ಟ್ ಆಗಿದ್ದು, ಹೇಗಾದರೂ ಮಾಡಿ ಶೆಟ್ಟರ್ ಸೋಲಿಸಲೇ ಬೇಕು ಎಂಬ ತಂತ್ರಕ್ಕೆ ಮುಂದಾಗಿದೆ.
ಇದನ್ನೂ ಓದಿ: ನನ್ನ ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ: ಡಿಕೆ ಶಿವಕುಮಾರ್