ಹುಬ್ಬಳ್ಳಿ: ಸಾರ್ವಜನಿಕ ಶೌಚಾಲಯ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಸೇರಿಕೊಂಡು ಗುದ್ದಾಟ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಅಕ್ಕಿಹೊಂಡ ಪ್ರದೇಶದಲ್ಲಿ ಕಳೆದ 30 ವರ್ಷಗಳಿಂದ ಇದ್ದ ಸಾರ್ವಜನಿಕ ಶೌಚಾಲಯವನ್ನು ಕಿಡಿಗೇಡಿಗಳ ಗುಂಪೊಂದು ಏಕಾಏಕಿ ಕೆಡವಿ ಹಾಕಿದ ಹಿನ್ನೆಲೆ ಗಲಾಟೆ ನಡೆದಿದೆ.
ಪ್ರತಿ ನಿತ್ಯ ಮಾರುಕಟ್ಟೆಗೆ ಆಗಮಿಸುವವರಿಗೆ ಹಾಗೂ ಅಕ್ಕಿಹೊಂಡದಲ್ಲಿನ ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಶೌಚಾಲಯವನ್ನು ಕಟ್ಟಲಾಗಿತ್ತು. ಇರುವ ಒಂದು ಶೌಚಾಲಯಕ್ಕೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದ ಅಕ್ಕಪಕ್ಕ ಏರಿಯಾದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಆದರೆ ನಿನ್ನೆ ಅದು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಸಾರ್ವಜನಿಕರಿಗೆ, ಅಕ್ಕಿಹೊಂಡ ಪ್ರದೇಶದಲ್ಲಿರುವವರಿಗೆ ಇರುವುದು ಇದೊಂದೇ ಸಾರ್ವಜನಿಕ ಶೌಚಾಲಯ. ದಿನ ನಿತ್ಯ ಸಾವಿರಾರು ಜನರು ಈ ಶೌಚಾಲಯವನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇದೀಗ ಶೌಚಾಲಯ ಕೆಡವಿರುವ ಹಿನ್ನೆಲೆ, ಅದೇ ಜಾಗದಲ್ಲೇ ಶೌಚಾಲಯ ಮರಳಿ ಕಟ್ಟಬೇಕೆಂದು ಆಗ್ರಹಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಇದಕ್ಕೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಜೋತು ಬಿದ್ದಿರುವ ಕೇಬಲ್ ತೆರವು ಮಾಡದಿದ್ದರೆ ಕಟ್ಟುನಿಟ್ಟಿನ ಆದೇಶ: ಹೈಕೋರ್ಟ್ ಎಚ್ಚರಿಕೆ
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ-ಮಹಾನಗರ ಪಾಲಿಕೆ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್ ಶಿವು ಮೆಣಸಿನಕಾಯಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.