ಹುಬ್ಬಳ್ಳಿ: ಒಂದು ವಾರ ನಿರಂತರವಾಗಿ ಸುರಿದ ಭಾರಿ ಮಳೆಗೆ ನಗರದ ಜನರು ತತ್ತರಿಸಿದ್ದಾರೆ. ಹಲವು ಮನೆಗಳು ನೆಲಕಚ್ಚಿವೆ. ಆದ್ರೆ ಇಲ್ಲಿನ ಅಧಿಕಾರಿಗಳು ಮಾತ್ರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ದೋಬಿಘಾಟ್ನ ನಿವಾಸಿಗಳು ಕಿಡಕಾರಿದ್ದಾರೆ.
ಮನೆ ಮತ್ತು ಮನೆಗಳಲ್ಲಿನ ವಸ್ತುಗಳನ್ನು ಕಳೆದುಕೊಂಡು ಕಂಗಾಲಾಗಿರುವ ಜನರ ನಿತ್ಯದ ಬದುಕು ದುಸ್ತರವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಈವರೆಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಬಂದು ಸ್ಪಂದಿಸುವ ಕೆಲಸ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ವೋಟು ಬೇಕಾದಾಗ ಓಡೋಡಿ ಬರುವ ಜನಪ್ರತಿನಿಧಿಗಳು ಜನರ ಸಂಕಷ್ಟಗಳನ್ನು ಕೇಳಲು ಹಿಂದೇಟು ಹಾಕುತ್ತಾರೆ ಎಂದು ಸಂತ್ರಸ್ತರು ಸಿಡಿಮಿಡಿಗೊಂಡಿದ್ದಾರೆ.
ಅಧಿಕಾರಿಗಳಿಗೆ ಸಮಸ್ಯೆ ತಿಳಿಸಿದ್ರೆ ಕೇವಲ ಭರವಸೆ ನೀಡುತ್ತಾರೆಯೇ ಹೊರತು ಕೆಲಸ ಮಾಡುತ್ತಿಲ್ಲ. ಇನ್ನಾದರೂ ಪೊಳ್ಳು ಭರವಸೆಗಳನ್ನು ನೀಡದೇ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.