ಧಾರವಾಡ: ಕೋವಿಡ್ ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ನಿಯಮಾನುಸಾರ ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಬೇಕು. ಜಿಲ್ಲೆಯ ಎಲ್ಲಾ ಐಎಲ್ಐ ಲಕ್ಷಣ ಇರುವ ಜನರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಈಗ ಕೋವಿಡ್ ನಿರ್ವಹಣೆಯೇ ಎಲ್ಲಾ ಇಲಾಖೆಗಳ ಮೊದಲ ಆದ್ಯತೆ. ಎಲ್ಲಾ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳು ಇವೆ. ರೋಗದ ಲಕ್ಷಣ ಇಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಬಹುದು. ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿ ಪ್ರತಿದಿನ ಐಎಲ್ಐ ಪ್ರಕರಣಗಳ ವರದಿ ನೀಡದ ಆಸ್ಪತ್ರೆಗಳ ನೋಂದಣಿ ಅಮಾನತುಗೊಳಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಬೇರೆ ಜಿಲ್ಲೆಗಳಿಂದ ಆಗಮಿಸಿ ನೇರವಾಗಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಅವರ ಸ್ಥಳೀಯ ವಿಳಾಸದಲ್ಲಿ ಖುದ್ದಾಗಿ ಮಾಹಿತಿ ಸಂಗ್ರಹಿಸಿ ಸೋಂಕು ಹೊಂದಿದ ವ್ಯಕ್ತಿಗಳು ಭೇಟಿ ನೀಡದಿರುವುದು ಖಚಿತಪಟ್ಟರೆ ಆ ಪ್ರದೇಶ ಸೀಲ್ ಡೌನ್ ಮಾಡುವುದರಿಂದ ವಿನಾಯಿತಿ ನೀಡಬಹುದು. ಹೋಂ ಕ್ವಾರಂಟೈನ್ ಉಲ್ಲಂಘಿಸುವವರ ಪಟ್ಟಿಯನ್ನು ಪೊಲೀಸರಿಗೆ ಒದಗಿಸಿ ಅವರ ಮೂಲಕ ಎಚ್ಚರಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ.ಸತೀಶ್ ಮಾತನಾಡಿ, ಅವಳಿನಗರದಲ್ಲಿ 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ಕನಿಷ್ಠ ಶೇ. 50ರಷ್ಟು ಕಡೆಗಳಲ್ಲಿ ಕೋವಿಡ್ ಗಂಟಲು ದ್ರವ ಸಂಗ್ರಹಣೆ ಕಾರ್ಯ ಪ್ರಾರಂಭಿಸಬೇಕು. ಗ್ರಾಮೀಣ ಜನರು ತಮ್ಮ ಸಮೀಪದ ಸ್ಥಳಗಳಲ್ಲಿಯೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಸೌಲಭ್ಯ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.