ಹುಬ್ಬಳ್ಳಿ: ಕೋವಿಡ್-19 ಹಿನ್ನೆಲೆ ದೇಶದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿ ಶಿಕ್ಷಕರು ಹಾಗೂ ಪೂರಕ ಸಿಬ್ಬಂದಿ ಜೂ. 8ರ ಒಳಗಾಗಿ ಶಾಲಾ-ಕಾಲೇಜುಗಳಿಗೆ ಹಾಜರಾಗಿ ಶಾಲೆ ಪ್ರಾರಂಭದ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರ ಮರು ಪರಿಶೀಲನೆ ಮಾಡಬೇಕೆಂದು ಕರ್ನಾಟಕ ಸರ್ಕಾರ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಿಗೆ ಹಾಜರಾಗಲು ಶಿಕ್ಷಕರು ಅವರವರ ತವರು ಜಿಲ್ಲೆಗಳನ್ನು ಬಿಟ್ಟು ಕೇಂದ್ರ ಸ್ಥಾನಕ್ಕೆ ಬರಬೇಕಾಗುವುದು. ಆಗ ಅನ್ಯ ಜಿಲ್ಲೆಗಳಲ್ಲಿನ ಡೇಂಜರ್ ಝೋನ್, ಕಂಟೈನ್ಮೆಂಟ್ ಝೋನ್ಗಳಿಂದಲೂ ಶಿಕ್ಷಕರು ಶಾಲೆಗಳಿಗೆ ಹಾಜರಾಗುವ ಕಾರಣ ಅವರಿಂದ ಇತರೆ ಶಿಕ್ಷಕರಿಗೆ ತೊಂದರೆ ಆಗಬಹುದು. ಅಲ್ಲದೆ ಗ್ರಾಮೀಣ ಪ್ರದೇಶಕ್ಕೂ ಸೋಂಕು ಹರಡುವ ಸಾಧ್ಯತೆ ಇದ್ದು, ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ದಿಸೆಯಲ್ಲಿ ಸರ್ಕಾರ ಮತ್ತೊಮ್ಮೆ ಆದೇಶದ ಮರು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.