ಧಾರವಾಡ: 19 ವರ್ಷದ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ, ಆಕೆ ತಾಯಿಯಾಗುವಂತೆ ಮಾಡಿದ್ದ 60 ವರ್ಷದ ವೃದ್ಧನನ್ನು ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಹಿರೇಮಲ್ಲಿಗವಾಡ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪೀರಪ್ಪ ಕುಂಬಾರಕೊಪ್ಪ ಎಂಬಾತ ಬಂಧಿತ ಆರೋಪಿ. ಯುವತಿಯ ತಾಯಿ ಯಾರಿಗೂ ಗೊತ್ತಾಗದಂತೆ ಹೆರಿಗೆ ಮಾಡಿಸಿ ಬೀದಿಗೆ ಎಸೆದು ಪರಾರಿಯಾಗಿದ್ದಳು. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಧಾರವಾಡ ಮಹಿಳಾ ಠಾಣೆಯ ಇಬ್ಬರು ಪೇದೆಗಳಿಂದ ಮಾರುವೇಷದಲ್ಲಿ ಆರು ತಿಂಗಳು ಕಾರ್ಯಾಚರಣೆ ನಡೆಸಿ ಕಾಮುಕ ವೃದ್ಧ ಮತ್ತು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದ ಯುವತಿಯ ತಾಯಿಯನ್ನು ಬಂಧಿಸಿದ್ದಾರೆ.
ಪ್ರಕರಣ ಹಿನ್ನೆಲೆ: 2018ರ ನವೆಂಬರ್‌ನಲ್ಲಿ ರಸ್ತೆ ಪಕ್ಕ ಅನಾಥವಾಗಿ ಒಂದು ನವಜಾತ ಶಿಶು ಸಿಕ್ಕಿತ್ತು. ಅನಾಥ ಶಿಶು ಪತ್ತೆ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮಹಿಳಾ ಠಾಣೆಯ ಪೇದೆಗಳಿಬ್ಬರು ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ಕೊನೆಗೂ ವೃದ್ಧನನ್ನು ಬಂಧಿಸಿದ್ದಾರೆ. ಇವರ ಕಾರ್ಯಾಚರಣೆಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.