ಹುಬ್ಬಳ್ಳಿ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಭಾನುವಾರ ಪ್ರಕಟವಾಗಿದ್ದು, ಅತ್ಯುತ್ತಮ ಸಮಾಜ ಸೇವೆ ಮಾಡುತ್ತಿರುವ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್ ಹುಬ್ಬಳ್ಳಿ ಮಹಾವೀರ ಲಿಂಬ್ ಸೆಂಟರ್ ಸಂಸ್ಥೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.
ಈ ಸಂಸ್ಥೆ ಕಳೆದ 20 ವರ್ಷಗಳಿಂದ 200ಕ್ಕೂ ಹೆಚ್ಚು ಕೃತಕ ಕಾಲು ಜೋಡಣಾ ಶಿಬಿರಗಳನ್ನು ಆಯೋಜಿಸಿದ್ದು, 40 ಸಾವಿರ ವಿಕಲಚೇತನರಿಗೆ ಕೃತಕ ಕಾಲು ಜೋಡಣೆ ಮಾಡಿದೆ. ಈ ಪ್ರಶಸ್ತಿ ಅವರ ಸೇವೆಗೆ ಸಂದ ಗೌರವವಾಗಿದೆ.
ಸಂಸ್ಥೆಯು ಸೀಳು ತುಟಿ ಸಮಸ್ಯೆ ಎದುರಿಸುತ್ತಿದ್ದ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗೆ ನೆರವಾಗಿದೆ. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಡ ವಿದ್ಯಾರ್ಥಿಗಳಿಗೆ ಅಹಿಂಸಾ ನೋಟ್ ಪುಸ್ತಕ ವಿತರಿಸಲಾಗುತ್ತಿದೆ. ಅಲ್ಲದೇ ಮಹಾವೀರ ಪಠ್ಯಪುಸ್ತಕ ಬ್ಯಾಂಕ್‌ನಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಲಾಗುತ್ತಿದೆ.
ಕೃತಕ ಕಾಲು ಜೋಡಣೆಗೆ ಉತ್ತರ ಕರ್ನಾಟಕದ ಜನ ಜೈಪುರಕ್ಕೆ ಹೋಗಬೇಕಾಗಿತ್ತು. ಸಂಸ್ಥೆ ಈ ಸಮಸ್ಯೆಯನ್ನು ತಪ್ಪಿಸಿ ಸಾವಿರಾರು ಜನ ವಿಕಲಚೇತನರಿಗೆ ಕೃತಕ ಕಾಲು ಜೋಡಿಸಲು ನೆರವಾಗಿದೆ. ಈ ಸಂದರ್ಭದಲ್ಲಿ ಜೈನ್ ಯೂತ್ ಫೆಡರೇಷನ್ಗೆ ಪ್ರಶಸ್ತಿ ಲಭಿಸಿದ್ದು, ಸಂಸ್ಥೆಯ ಕೀರ್ತಿ ಹೆಚ್ಚುವಂತೆ ಮಾಡಿದೆ.