ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆ ಬಂದ್ರೆ ಸಾಕು, ನೀರು ಎಲ್ಲೆಂದರಲ್ಲಿ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ. ಇದಕ್ಕೆಲ್ಲ ಕಾರಣ ರಾಜಕಾಲುವೆ ಒತ್ತುವರಿ. ಕಾಲುವೆ ಒತ್ತುವರಿಯಾಗಿದ್ರು, ಪಾಲಿಕೆ ಮಾತ್ರ ಒತ್ತುವರಿ ತೆರವಿಗೆ ಮುಂದಾಗಿಲ್ಲ.
ಕಳೆದ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ನಗರದಲ್ಲಿನ ರಾಜ ಕಾಲುವೆಗಳು ಕೂಡಾ ತುಂಬಿ ಹರಿದು ದೊಡ್ಡ ಪ್ರವಾಹವನ್ನೇ ಸೃಷ್ಟಿ ಮಾಡಿದವು. ಹೀಗಾಗಿ ಜನರು ಮನೆ ಮಠ ಕಳೆದುಕೊಂಡಿದ್ದರು. ಕಾಲುವೆ ಒತ್ತುವರಿಯಿಂದಾಗಿ, ಮಳೆ ಬಂದಾಗ ನೀರು ನುಗ್ಗಿ ಹಲವು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಒತ್ತುವರಿ ತೆರವಿಗೆ ಸಾರ್ವಜನಿರು ಆಗ್ರಹಿಸಿದ್ರು, ಪ್ರಯೋಜನವಾಗಿಲ್ಲ.
ಉಣಕಲ್ ಕೆರೆಯಿಂದ ಗಬ್ಬೂರವರೆಗಿನ 11 ಕಿಲೋ ಮೀಟರ್ ರಾಜಕಾಲುವೆ ಒತ್ತುವರಿಯಾಗಿದೆ. ಮ್ಯಾದರ್ ಓಣಿಯಲ್ಲಿಯು ರಾಜಕಾಲುವೆ ಮೇಲೆಯೆ, ವಾಣಿಜ್ಯ ಮಳಿಗೆಗಳ ಕಟ್ಟಡಗಳು ತಲೆ ಎತ್ತಿವೆ. ಇವುಗಳನ್ನ ತೆರವುಗೊಳಿಸಬೇಕಿದ್ದ ಪಾಲಿಕೆ ಅಧಿಕಾರಿಗಳು ಮಾತ್ರ ಗಾಢ ನಿದ್ದೆಯಲ್ಲಿದ್ದಾರೆ.ಹುಬ್ಬಳ್ಳಿ ನಗರದ ವಿವಿಧೆಡೆ ಆಗಿರುವ ರಾಜ ಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಹಲವು ಕಡೆಗಳಲ್ಲಿ ಪಾಲಿಕೆಯವರೇ ಕಾಲುವೆ ಮೇಲೆ ಕಟ್ಟಡ ಕಟ್ಟಿಕೊಳ್ಳಲು ಪರವಾನಗಿ ಕೊಟ್ಟಿದ್ದಾರೆ.