ಹುಬ್ಬಳ್ಳಿ: ವಾಯು ಮಾಲಿನ್ಯದಿಂದ ರೋಸಿ ಹೋಗಿರುವ ಹುಬ್ಬಳ್ಳಿ-ಧಾರವಾಡ ಯುವಕರ ತಂಡವೊಂದು ವಿನೂತನ ಪ್ರಯೋಗವೊಂದನ್ನು ಕೈಗೆತ್ತಿಕೊಂಡಿದೆ. ಇಷ್ಟು ದಿನ ಶಾಲೆಗಳಿಗೆ ಬಣ್ಣ ಬಳೆಯುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದ ಇವರು, ಇದೀಗ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈ ಜೋಡಿಸಿದ್ದು ಧೂಳು ಮುಕ್ತ ನಗರ ನಿರ್ಮಾಣ ಪಣ ತೊಟ್ಟಿದ್ದಾರೆ.
ಕಾರವಾರ ರಸ್ತೆ ಗ್ರಿಡ್ನ ಸದ್ಗುರು ಸಿದ್ಧಾರೂಢ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಜೈನ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ, ಕಸದಿಂದ ರಸ ಎಂಬ ಯೋಜನೆ ಅಡಿಯಲ್ಲಿ ಶುದ್ಧ ವಾಯು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ. ವಾಯು ಮಾಲಿನ್ಯದ ನಿಯಂತ್ರಣ ಮಾಡಲು ಇದು ನೆರವಾಗಲಿದ್ದು, ಪೊಲೀಸರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಯಂತ್ರವನ್ನು ಕೊಟ್ಟಿದ್ದಾರೆ.
ದೆಹಲಿಯಲ್ಲಿನ ಒಂದು ಘಟಕ ಹೊರತುಪಡಿಸಿದ್ರೆ, ದೇಶದಲ್ಲಿಯೇ ಇದು ಎರಡನೇಯದಾಗಿದೆ. ರಾಜ್ಯದಲ್ಲಿ ಇದೇ ಮೊದಲ ಶುದ್ದವಾಯು ಘಟಕವಾಗಿದ್ದು, ಜೈನ ಕಾಲೇಜಿನ ವಿದ್ಯಾರ್ಥಿಗಳು ಪ್ರಯೋಗಾರ್ಥವಾಗಿ 85 ಸಾವಿರ ವೆಚ್ಚದಲ್ಲಿ ತಯಾರಿಸಿದ್ದಾರೆ. ಇದು ಸುಮಾರು 50 ರಿಂದ 100 ಮೀಟರ್ ವ್ಯಾಪ್ತಿಯಲ್ಲಿನ ವಾಯುವನ್ನು ಶುದ್ಧಗೊಳಿಸಿ, ಉತ್ತಮವಾದ ವಾಯುವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಸಾರ್ವಜನಿಕರಿಗೆ ಉತ್ತಮ ವಾತಾವರಣ ನೀಡುವ ಗುರಿಯನ್ನು ಹಳೆಯ ವಿದ್ಯಾರ್ಥಿಗಳ ಸಂಘ ಹೊಂದಿದೆ. ಒಟ್ಟು 09 ಸರ್ಕಾರಿ ಕನ್ನಡ ಶಾಲೆಗೆ ಬಣ್ಣ ಬಳೆಯುವ ಮೂಲಕ ಜನಮನ್ನಣೆ ಪಡೆದಿದ್ದ ಈ ತಂಡ, ಒಂದೊಂದು ಹಂತದಲ್ಲಿ ಮುನ್ನುಗ್ಗುತ್ತಾ ಎಲ್ಲೆಡೆ ಪ್ರಶಂಸೆ ಗಳಿಸಿದೆ.
ಶಾಲೆ, ಕಾಲೇಜು ಹಾಗೂ ಸಮಾಜ ಸುಧಾರಣೆಯಲ್ಲಿ ಇವರ ಕಾರ್ಯ ಮಹತ್ವ ಪಡೆದುಕೊಂಡಿದ್ದು, ಎಷ್ಟೇ ಕೆಲಸದ ಒತ್ತಡವಿದ್ದರೂ ಕೂಡ ಎಲ್ಲವನ್ನೂ ಬದಿಗಿಟ್ಟು ಸಾಮಾಜಿಕ ಕಾರ್ಯ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳ ಸೇವೆ ನಿಜಕ್ಕೂ ಸ್ಮರಣೀಯವಾಗಿದೆ.