ಹುಬ್ಬಳ್ಳಿ: ಗ್ರಾಮೀಣ ಭಾಗದ ಜನರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸದುದ್ದೇಶದಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಈ ಘಟಕಗಳು ಲೆಕ್ಕಕ್ಕುಂಟು ಉಪಯೋಗಕ್ಕೆ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಶುದ್ಧ ನೀರಿನ ಘಟಕಗಳಿವೆ. ಯರಗುಪ್ಪಿಯಲ್ಲಿ ಎರಡು, ಚಿಕ್ಕನೇರ್ತಿಯಲ್ಲಿ ಒಂದು, ಮುಳ್ಳೋಳ್ಳಿಯಲ್ಲಿ ಒಂದು ಹೀಗೆ ಒಟ್ಟು ನಾಲ್ಕು ಘಟಕಗಳು ಬಂದ್ ಆಗಿವೆ. ಇವುಗಳು ಕಾರ್ಯಾರಂಭ ಮಾಡುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಇನ್ನು, ಸ್ಥಗಿತಗೊಂಡ ಸಂದರ್ಭದಲ್ಲಿ ದುರಸ್ತಿ ಮಾಡಿ ಪ್ರಾರಂಭ ಮಾಡಿದ್ದರೂ ಕೂಡ ಮತ್ತೆ ಕಿರಿಕಿರಿಯಾಗಿ ಬಂದ್ ಆಗುತ್ತಿದ್ದು, ಶಾಶ್ವತ ಪರಿಹಾರ ಮಾತ್ರ ಇಲ್ಲವಾಗಿದೆ. ಗ್ರಾಮದ ಜನರು ಶುದ್ಧ ನೀರು ಬೇಕೆಂದರೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿ ನೀರು ತೆಗೆದುಕೊಂಡು ಬರಬೇಕಾಗಿದೆ.
ಈ ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕು ಅನ್ನೋದು ಸಾರ್ವಜನಿಕರ ಒತ್ತಾಯ.