ಹುಬ್ಬಳ್ಳಿ: ಹೃದಯಾಘಾತದಿಂದ ಬಳಲುತ್ತಿದ್ದ ಮಹಿಳೆ ಸಾವನಪ್ಪಿದ್ದರು ಹಣ ಪಡೆದ ಮೇಲೆಯೇ ಖಾಸಗಿ ಆಸ್ಪತ್ರೆಯವರು, ರೋಗಿ ಸಾವನಪ್ಪಿರುವ ವಿಚಾರ ಹೇಳಿದ್ದಾರೆ ಎಂದು ರೋಗಿಯ ಸಂಬಂಧಿಕರು ಆರೋಪ ಮಾಡಿರುವ ಘಟನೆ ದೇಶಪಾಂಡೆ ನಗರದಲ್ಲಿ ತಡರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದ ಸುವರ್ಣ ಕಕ್ಕಯ್ಯಗೋಳ, ಎಂಬ ಮಹಿಳೆ ಕೆಲವು ದಿನಗಳ ಹಿಂದೆ ದೇಶಪಾಂಡೆ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿ ಖಾಯಿಲೆಗಾಗಿ ಸರ್ಕಾರದ ಯೋಜನೆಯಡಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದರು. ಆದರೆ, ನಂತರ 30 ಸಾವಿರ ಹಣವನ್ನ ಕೊಡುವಂತೆ ಕೇಳಿದ್ದರಿಂದ ಹಣ ಪಾವತಿ ಮಾಡಿದ್ದೇವೆ. ಆದರೆ, ಮೂವತ್ತು ಸಾವಿರ ರೂಪಾಯಿ ಕೊಡುವ ಮುನ್ನವೇ ನಮ್ಮ ಅಕ್ಕ ಸಾವನ್ನಪ್ಪಿದ್ದಾಳೆ ಎಂದು ಮೃತ ಮಹಿಳೆಯ ಸಹೋದರಿ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಸುವರ್ಣ ಸಾವಿನಿಂದ ಮನೆಯವರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.