ಧಾರವಾಡ: ಪೌರಕಾರ್ಮಿಕರಿಗೆ ಸೂಕ್ತ ಸ್ಥಾನಮಾನ ನೀಡುವ ಜೊತೆಗೆ ಮಾನವೀಯತೆಯಿಂದ ನೋಡಬೇಕು. ಸರ್ಕಾರ ಅವರಿಗೆ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಹಾಗೂ ರಾಜ್ಯದ ಎಲ್ಲಾ ಪೌರಕಾರ್ಮಿಕರ ಸೇವೆ ಖಾಯಂಗೊಳಿಸುವಂತೆ ಸರ್ಕಾರಕ್ಕೆ ಆಯೋಗ ಶಿಫಾರಸ್ಸು ಮಾಡಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ (ಕೋಟೆ) ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ 2013 ಅನುಷ್ಠಾನ ಕುರಿತು ತರಬೇತಿ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಪೌರಕಾರ್ಮಿಕರ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರಬಾರದು. ಕಾಳಜಿಯಿಂದ ನೋಡಿಕೊಳ್ಳಬೇಕು. ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ 2013 ಜಾರಿಗೆ ಬಂದಿದೆ. ರಾಜ್ಯದಲ್ಲಿ ಪೌರಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಮಾಡುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳ ಸಮ್ಮುಖದಲ್ಲಿ ಪೌರಕಾರ್ಮಿಕರಿಗೆ 42 ಸುರಕ್ಷತಾ ಸಾಮಗ್ರಿಗಳನ್ನು ನೀಡಿ, ತರಬೇತಿ ಪಡೆದ ನುರಿತ ಕಾರ್ಮಿಕರಿಂದ ಮಾತ್ರ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ನಡೆಸಲು ಅವಕಾಶವಿರುತ್ತದೆ. ಒತ್ತಾಯಪೂರ್ವಕವಾಗಿ ಅಥವಾ ದಬ್ಬಾಳಿಕೆಯಿಂದ ಸ್ಕ್ಯಾವೆಂಜಿಂಗ್ ನಡೆಸಲು ಒತ್ತಾಯ ಹೇರುವಂತಿಲ್ಲ. ಅಂತಹ ಪ್ರಕರಣಗಳು ಬೆಳಕಿಗೆ ಬಂದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು. ಪೌರಕಾರ್ಮಿಕರಿಗೆ ಕಾನೂನು ಪ್ರಕಾರ ವಿಮೆ, ವೈದ್ಯಕೀಯ ಸೌಲಭ್ಯ ನೀಡಬೇಕು ಎಂದರು.
ಆಯೋಗದ ಕಾರ್ಯದರ್ಶಿ ರಮಾ ಮಾಥನಾಡಿ, ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ 2013ರ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿ, ಕಾಯ್ದೆ ಉಲ್ಲಂಘನೆಯಾಗದಂತೆ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪ್ರಕರಣ ಬೆಳಕಿಗೆ ಬಂದ ತಕ್ಷಣ ಅಂತಹ ಅಧಿಕಾರಿಗಳ ವಿರುದ್ಧ ದಂಡ ಹಾಕಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.