ಧಾರವಾಡ: ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಬೇಕು ಎಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಸರ್ಕಾರ ಸರಿಯಾಗಿ ಯೂರಿಯಾ ಗೊಬ್ಬರ ಪೂರೈಕೆ ಮಾಡುತ್ತಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರದ ಅಸಮರ್ಪಕ ಗೊಬ್ಬರ ಪೂರೈಕೆಯಿಂದಾಗಿ ರೈತರು ಪರದಾಡುವಂತಾಗಿದೆ. ಆದರೆ ಧಾರವಾಡ ಜಂಟಿ ನಿರ್ದೇಶಕರು ಮಾತ್ರ ಗೊಬ್ಬರದ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿದೆ. ರೈತರಿಗೆ ಸರಿಯಾಗಿ ಗೊಬ್ಬರ ವಿತರಣೆ ಮಾಡಬೇಕು. ಇದ ಜೊತೆಗೆ ಖಾಸಗಿ ಅಂಗಡಿಗಳಲ್ಲಿ ರೈತರ ಮೇಲೆ ನಡೆಯುತ್ತಿರುವ ಹಗಲು ದರೋಡೆ ನಿಲ್ಲಬೇಕು. ಸಕಾಲಕ್ಕೆ ಬೀಜ, ಗೊಬ್ಬರ ಒದಗಿಸಿ ಎಂದು ಆಗ್ರಹಿಸಿದರು.