ಹುಬ್ಬಳ್ಳಿ: ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನರ ಪರಮೋಚ್ಛ ತೀರ್ಥ ಕ್ಷೇತ್ರ ಶ್ರೀ ಸಮ್ಮೇದಗಿರಿ ಉಳಿಸಿ, ಪ್ರವಾಸಿ ತಾಣವೆಂದು ಘೋಷಣೆ ರದ್ದುಪಡಿಸಿ ಜೈನ ಪವಿತ್ರ ಕ್ಷೇತ್ರವಾಗಿ ಘೋಷಿಸುವಂತೆ ಒತ್ತಾಯಿಸಿ ಡಿ. 21 ರಂದು ದಿಗಂಬರ ಜೈನ ಸಮಾಜದ ವತಿಯಿಂದ ಮೌನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ಜೈನ ಮುಖಂಡ ಮಹೇಂದ್ರ ಸಿಂಘಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾರಸನಾಥ ಪರ್ವತ ಶ್ರೀ ಸಮ್ಮೇದಗಿರಿಯನ್ನು ಮತ್ತು ಸುತ್ತಲಿನ ಮಧುಬನ ಪ್ರದೇಶವನ್ನು ಮಾಂಸ-ಮದ್ಯ ಮಾರಾಟ ಮುಕ್ತ ಪವಿತ್ರ ಜೈನ ತೀರ್ಥ ಎಂದು ಘೋಷಿಸಬೇಕು. ಪರ್ವತ ಪ್ರದೇಶದಲ್ಲಿ ಮರಗಳನ್ನು ಕಾನೂನಿಗೆ ವಿರುದ್ಧವಾಗಿ ಮತ್ತು ಅನಗತ್ಯವಾಗಿ ಕತ್ತರಿಸುವುದು, ಗಣಿಗಾರಿಕೆ ನಡೆಸುವುದು, ಬೆಂಕಿಗೆ ಆಹುತಿ ಮಾಡುವುದು ಸೇರಿದಂತೆ ಇತರ ಮಾರಕವಾಗುವ ಕಾರ್ಯವನ್ನು ಪ್ರತಿಬಂಧಿಸಬೇಕು.
ಪಾರಸನಾಥ ಪರ್ವತವನ್ನು ವನ್ಯಜೀವ ಅಭಯಾರಣ್ಯ ಪರ್ಯಾವರಣ ಪರ್ಯಟನಕ್ಕಾಗಿ ಘೋಷಿತ ಇಕೋ ಸೆನ್ಸಿಟಿವ್ ಝೋನ್ನ ಅಂತರ್ಗತ ಮಾಸ್ಟರ್ ಪ್ಲಾನ್ ಮತ್ತು ಪರ್ಯಟನಾ ಅಥವಾ ಪ್ರವಾಸಿ ಪರ್ಯಟನಾ ಸೂಚಿಯಂತೆ ಹೊರಗಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಲಾಗುವುದು ಎಂದರು.
ಬೇಡಿಕೆಗಳಿಗೆ ಆಗ್ರಹಿಸಿ ಹುಬ್ಬಳ್ಳಿಯ ಶಾಂತಿನಾಥ ಸಾಂಸ್ಕೃತಿಕ ಭವನದಿಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಮಂತ್ರಾಲಯ, ಜಾರ್ಖಂಡ್ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳು, ಸಂಸದರಿಗೆ ಆಗ್ರಹ ಮಾಡಲಾಗುವುದು ಎಂದು ತಿಳಿಸಿದರು.