ಹುಬ್ಬಳ್ಳಿ: ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ರೈತ ಹೋರಾಟ ಸಮಿತಿಯಿಂದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬೃಹತ್ ಪ್ರತಿಭಟನಾ ಮೆರವಣಿಗೆ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತಾನಡಿದ ರೈತ ಮುಖಂಡ ಮುತ್ತಣ್ಣ ಶಿವಳ್ಳಿ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರದಿಂದ ಕನಿಷ್ಟಮಟ್ಟದ ಬೆಳೆ ನಷ್ಟ ಪರಿಹಾರ ಕೊಡಲಾಗುತ್ತಿದೆ. ನೆರೆಪೀಡಿತ ಪ್ರದೇಶಗಳ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಪಂಪ್‌ಸೆಟ್, ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಹಾನಿಗೊಳಗಾದ ಜಮೀನನ್ನು ಸಮತಟ್ಟು ಮಾಡಿಕೊಡಬೇಕು. ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ, ಹಾನಿಯಾದವರಿಗೆ ಐದು ಲಕ್ಷ ಪರಿಹಾರ ಹಾಗೂ ರಸ್ತೆ, ಸೇತುವೆಗಳ ದುರಸ್ತಿಕಾರ್ಯ ತೀವ್ರಗತಿಯಲ್ಲಿ ನಡೆಯಬೇಕು ಎಂದರು.
ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು.