ಹುಬ್ಬಳ್ಳಿ: ಬೆಂಗಳೂರು ಮಿಂಟೋ ಆಸ್ಪತ್ರೆಯ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹುಬ್ಬಳ್ಳಿ ವೈದ್ಯರ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡ ವೈದ್ಯರು ಪ್ರತಿಭಟನೆ ನಡೆಸಿದರು. ಕಾರ್ಯನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ ಕರವೇ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ, ಪದೇ ಪದೆ ವೈದ್ಯರ ಮೇಲೆ ಹಲ್ಲೆಯಾಗುತ್ತಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈದ್ಯರಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ತಹಶೀಲ್ದಾರರ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.