ಧಾರವಾಡ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಪಾದಯಾತ್ರೆ ಆರಂಭಿಸಿದ್ದಾರೆ. ಪಾದಯಾತ್ರೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದಿಕ್ಕಾರ ಕೂಗುತ್ತಾ ಸಾಗುತ್ತಿದ್ದಾರೆ.
ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ ಆರಂಭಗೊಂಡಿರುವ ಪಾದಯಾತ್ರೆ ಪುಡಕಲಕಟ್ಟಿ, ಕರಡಿಗುಡ್ಡ, ತಿಮ್ಮಾಪೂರ, ಮರೇವಾಡ ಮೂಲಕ ಸವದತ್ತಿ ರಾಜ್ಯ ಹೆದ್ದಾರಿಗೆ ಆಗಮಿಸಿ ಮುರುಘಾಮಠ, ಡಿಪೋ ಸರ್ಕಲ್, ಶಿವಾಜಿ ಸರ್ಕಲ್, ಜುಬ್ಲಿ ಸರ್ಕಲ್ ಮೂಲಕ ಡಿಸಿ ಕಚೇರಿಯತ್ತ ತಲುಪಲಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಸ್ವತಃ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಬಿದ್ದ ಮನೆಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡುವುದು, ರೈತರ ಹೊಲಗಳಿಗೆ ರಸ್ತೆ ನಿರ್ಮಾಣ, ಬೆಳೆ ವಿಮೆ, ಬೆಳೆ ಪರಿಹಾರ ನೀಡುವುದು ಸೇರಿದಂತೆ ರೈತರ ಅನೇಕ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಈ ಪಾದಯಾತ್ರೆಯನ್ನು ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದಾರೆ.
ಇದನ್ನೂ ಓದಿ:ರೈತ ವಿರೋಧಿ ನೀತಿ ಖಂಡಿಸಿ ಹೆದ್ದಾರಿ ತಡೆದು ಪ್ರತಿಭಟಿಸಿದ 'ಸಂಯುಕ್ತ ಹೋರಾಟ ಕರ್ನಾಟಕ'
ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆದಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ? ಮತ್ತು ಯಾವ ರೀತಿಯಾಗಿ ರೈತರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಎಂಬುದರ ಕುರಿತಾದ ವರದಿ ಇಲ್ಲಿದೆ.
ಚಿಕ್ಕಮಗಳೂರಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನಗರದಲ್ಲಿ 'ಸಂಯುಕ್ತ ಹೋರಾಟ ಕರ್ನಾಟಕ' ಸಮಿತಿಯಿಂದ ಹೆದ್ದಾರಿ ತಡೆದು ಪ್ರತಿಭಟಿಸಲಾಗಿದೆ. ಈಗಾಗಲೇ ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ರೈತರು ಜೀವ ಬಿಟ್ಟಿದ್ದಾರೆ. ಅಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು. ತೆಲಂಗಾಣ ಸರ್ಕಾರ ಪ್ರತೀ ಕುಟುಂಬಕ್ಕೆ ₹3 ಲಕ್ಷ ನೀಡುವುದಾಗಿ ಘೋಷಿಸಿದೆ. ಆದರೆ, ಬೊಮ್ಮಾಯಿ ಅವರದ್ದು, ರೈತ ವಿರೋಧಿ ಧೋರಣೆ ಹೊಂದಿರುವ ಸರ್ಕಾರ. ಆದ್ದರಿಂದ, ಕಾಯ್ದೆಗಳನ್ನು ವಾಪಸ್ ಪಡೆಯುವುದರ ಜೊತೆಗೆ ಪರಿಹಾರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದರು.
ಚನ್ನರಾಯಪಟ್ಟಣದಲ್ಲಿ ರೈತ ಮುಖಂಡರಿಂದ ರಸ್ತೆ ತಡೆ: ಬಿರು ಬಿಸಿಲನ್ನು ಲೆಕ್ಕಿಸದೇ ರಸ್ತೆ ಮಧ್ಯೆ ಕುಳಿತ ರೈತರು ಹಾಗೂ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಅವರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದರು. ರಸ್ತೆ ತಡೆ ನಡೆಸಿದ್ದರಿಂದ ಕೆಲ ಕಾಲ ವಾಹನ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಹಾಸನ ಎಸ್ಪಿ ಶ್ರೀನಿವಾಸಗೌಡ ಪ್ರತಿಭಟನಾಕಾರರ ಮನವೊಲಿಸಿದ್ದರು.
ಹೊಸಪೇಟೆ - ಧಾರವಾಡದಲ್ಲಿ ಪ್ರತಿಭಟನೆ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ರೈತರು ನಗರದ ಸಂಕ್ಲಾಪುರದಲ್ಲಿನ ರಾಷ್ಟ್ರೀಯ ಹೆದ್ದಾರಿ - 63 ಬಂದ್ ಮಾಡಿ ಪ್ರತಿಭಟಿಸಿದ್ದರು. ಕೇಂದ್ರ ಸರ್ಕಾರಕ್ಕೆ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.
ಹಾಸನದಲ್ಲಿ ಉಪವಾಸ ಸತ್ಯಾಗ್ರಹ: ಸರ್ಕಾರ ರೈತ ವಿರೋಧಿ ನೀತಿಯ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಹೇಮಾವತಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹದೊಂದಿಗೆ ತೀವ್ರ ಪ್ರತಿಭಟನೆ ನಡೆಸಲಾಗಿತ್ತು.
ರೈತರಿಗೆ ಬೆಂಬಲವಿತ್ತ ಕಾಂಗ್ರೆಸ್ ನಾಯಕರು: ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದರು. ಅದಕ್ಕೆ ಪೂರಕ ಎಂಬಂತೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ರಾಜಭವನ ಚಲೋವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ನಾಯಕರು, ಕಾರ್ಯಕರ್ತರು, ರೈತರು, ರೈತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಸರ್ಕಾರ ಪಿಂಚಣಿ ಯೋಜನೆಯನ್ನು ವ್ಯಾಪಾರಿ ದೃಷ್ಟಿಕೋನದಿಂದ ನೋಡುತ್ತಿದೆ: ಡಿಕೆಶಿ ಬೇಸರ