ಹುಬ್ಬಳಿ: ಕೇಂದ್ರ ಸರ್ಕಾರದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟ, ಹುಬ್ಬಳ್ಳಿ ಆಟೋ ರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘದ ನೇತೃತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಕಾಯ್ದೆ ತಿದ್ದುಪಡಿ ಮಾಡುವಂತೆ ಆಗ್ರಹಿಸಿದರು. ಆಟೋಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಬಡವರ ರಕ್ತವನ್ನು ಹೀರುತ್ತಿದೆ. ಈ ಕಾಯ್ದೆ ಖಂಡನೀಯವಾಗಿದ್ದು, ಕೂಡಲೇ ತಿದ್ದುಪಡಿ ಮಾಡಬೇಕು ಎಂದರು.
ಮೊದಲು ನಗರದಲ್ಲಿ ಹದಗೆಟ್ಟು ಹೋಗಿರುವ ರಸ್ತೆಗಳನ್ನು ಸರಿ ಮಾಡಲಿ, ಅದನ್ನು ಬಿಟ್ಟು ಈ ರೀತಿ ಹೊರೆ ಹಾಕುವುದು ಸರಿಯಲ್ಲ. ದೇಶದಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುವ ಭ್ರಷ್ಟರಿದ್ದು, ಸರ್ಕಾರ ಮೊದಲು ಅವರನ್ನು ನಿಯಂತ್ರಣ ಮಾಡಲಿ. ಅದನ್ನು ಮಾಡದೇ ಜನಸಾಮಾನ್ಯರ ಮೇಲೆ ಹೊರೆ ಹಾಕಲು ಮುಂದಾಗುತ್ತಿರುವುದು ಖಂಡನೀಯ ಎಂದರು.