ಹುಬ್ಬಳ್ಳಿ: ತಾಲೂಕಿನ ಬುಡರಸಿಂಗಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿರುವ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿ ಬುಡರಸಿಂಗಿ ಗ್ರಾಮಸ್ಥರು ಇಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಗ್ರಾಮಸ್ಥ ಮಂಜುನಾಥ ಕಟಗಿ, ಫೆ. 24ರಂದು ಘಟನೆ ನಡೆದು ಪ್ರಕರಣ ದಾಖಲಾಗಿದ್ದರೂ ಕೂಡ ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ. ಅಲ್ಲದೇ ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಬುಡರಸಿಂಗಿ ಗ್ರಾಮದಲ್ಲಿ ಪಾಕ್ ಪರ ಗೋಡೆ ಬರಹ ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.