ಧಾರವಾಡ: ಕೋವಿಡ್-19 ಪ್ರಕರಣಗಳು ದಿನೇ-ದಿನೆ ಹೆಚ್ಚುತ್ತಿರುವುದರಿಂದ, ಸರ್ಕಾರಿ ಆಸ್ಪತ್ರೆಗಳು ಹಾಗೂ ಕಿಮ್ಸ್ ಜೊತೆಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳೂ ಕೂಡಾ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಸಾಮರ್ಥ್ಯದ ಶೇ.50 ರಷ್ಟು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಒಪ್ಪಿಗೆ ನೀಡಿವೆ. ಜಿಲ್ಲಾಡಳಿತ ಅಂತಹ ಆಸ್ಪತ್ರೆಗಳಿಗೆ ಅಗತ್ಯ ಸಹಕಾರ ನೀಡಲಿದೆ, ಇಂದಿನಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಪ್ರಾರಂಭವಾಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಕಾರ್ಯವನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಈ ಸಾಂಕ್ರಾಮಿಕ ವೈರಾಣುವನ್ನು ತಡೆಯಲು ಖಾಸಗಿ ಆಸ್ಪತ್ರೆಗಳ ಸಹಕಾರ ಕೂಡಾ ಮುಖ್ಯವಾಗಿದೆ. ಅವಳಿ ನಗರದಲ್ಲಿ 18 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿರುವ ಒಟ್ಟು ಹಾಸಿಗೆಗಳು, ಐಸಿಯು ಹಾಗೂ ವೆಂಟಿಲೇಟರ್ ಗಳ ಮಾಹಿತಿಯನ್ನು ಒದಗಿಸಿವೆ. ಇವುಗಳಲ್ಲಿ ಶೇ.50 ರಷ್ಟನ್ನು ಕೋವಿಡ್ ಚಿಕಿತ್ಸೆಗೆ ಒದಗಿಸಬೇಕು.
ರೋಗ ಲಕ್ಷಣ ಇರುವವರನ್ನು ಮತ್ತು ಸಾಮಾನ್ಯ ಜ್ವರ ಇರುವವರನ್ನು ಈ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು. ಸಾರ್ವಜನಿಕ ವಲಯದ ಆಸ್ಪತ್ರೆಯಿಂದ ಶಿಫಾರಸ್ಸುಗೊಂಡು ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಬಂದರೆ ಅವರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಬೇಕು ಎಂದರು.
ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ದಾಖಲಾದರೆ ಅದರ ವೆಚ್ಚವನ್ನು ರೋಗಿಗಳೇ ಭರಿಸುತ್ತಾರೆ. ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಆಕಸ್ಮಿಕವಾಗಿ ಕೋವಿಡ್‍ನಿಂದ ಮೃತಪಡುವ ವ್ಯಕ್ತಿಗಳ ಪಾರ್ಥಿವ ಶರೀರದ ನಿರ್ವಹಣೆ ಕುರಿತು ಮಾರ್ಗದರ್ಶನವನ್ನು ಅಗತ್ಯವಿರುವ ಆಸ್ಪತ್ರೆಗಳು ತಮ್ಮ ವೈದ್ಯರು ಮತ್ತು ಸಿಬ್ಬಂದಿಯನ್ನು ಕಿಮ್ಸ್ ಗೆ ನಿಯೋಜಿಸಿ ಒಂದು ದಿನ ತರಬೇತಿ ಪಡೆಯಬಹುದು. ಕಿಮ್ಸ್ ವೈದ್ಯರು ಮತ್ತು ಸಿಬ್ಬಂದಿಯ ತಂಡ ಮಾರ್ಗದರ್ಶನ ನೀಡಲಿದೆ ಎಂದರು.
ಅನ್ಯ ಜಿಲ್ಲೆಗಳಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದರೆ ಮಾತ್ರ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್ ಚಿಕಿತ್ಸೆಗಾಗಿ ಅನ್ಯ ಜಿಲ್ಲೆಗಳ ವ್ಯಕ್ತಿಗಳು ಯಾವುದೇ ಆಸ್ಪತ್ರೆಯ ಶಿಫಾರಸ್ಸು ಇಲ್ಲದೆ ನೇರವಾಗಿ ಹುಬ್ಬಳ್ಳಿ ಕಿಮ್ಸ್ ಗೆ ಬರುತ್ತಿದ್ದಾರೆ. ಇನ್ನು ಮುಂದೆ ರೋಗಿಗಳು ತಮ್ಮ ಜಿಲ್ಲೆಯಲ್ಲಿ ಹಾಸಿಗೆಗಳು ಲಭ್ಯವಿಲ್ಲ ಎಂಬ ಪತ್ರವನ್ನು ಸಂಬಂಧಿಸಿದ ಜಿಲ್ಲಾಸ್ಪತ್ರೆ ಅಥವಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಪಡೆದುಕೊಂಡು ಬಂದರೆ ಮಾತ್ರ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಿಸಿಕೊಳ್ಳಲಾಗುವುದು. ಈ ಕುರಿತು ನೆರೆಯ ಜಿಲ್ಲೆಗಳ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಮಾಹಿತಿ ನೀಡಲಾಗುವುದು ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಹೇಳಿದರು.