ಹುಬ್ಬಳ್ಳಿ: ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ಕಾರ್ಣಿಕೋತ್ಸವಕ್ಕೆ ತನ್ನದೇಯಾದ ಐತಿಹಾಸಿಕ ಹಿನ್ನೆಲೆ ಇದೆ. ಗೊರವಪ್ಪ ಹೇಳುವ ಭವಿಷ್ಯವಾಣಿ ಸತ್ಯವಾಗುತ್ತದೆ ಎಂಬ ನಂಬಿಕೆ ಇದೆ. ಮೈಲಾರದ ಮಾದರಿಯಲ್ಲಿ ಗೊರವಯ್ಯ ಭವಿಷ್ಯ ವಾಣಿ ನುಡಿಯುವ ಸಂಪ್ರದಾಯ ಕುಂದಗೋಳ ತಾಲೂಕಿನಲ್ಲಿಯೂ ನಡೆದುಕೊಂಡು ಬಂದಿದೆ.
ಮೈಲಾರದಲ್ಲಿ ವಾರ್ಷಿಕವಾಗಿ ಒಂದೇ ಕಾರ್ಣಿಕ ನುಡಿಯಲಾಗುತ್ತದೆ. ಆದ್ರೆ ಬೂಕೊಪ್ಪ ಗ್ರಾಮದಲ್ಲಿ ಮೂರು ಹಂತದಲ್ಲಿ ಗೊರವಯ್ಯ ಮೈಲಾರಲಿಂಗನ ದೇವವಾಣಿ ನುಡಿಯುತ್ತಾರೆ. ''ರತ್ನ ಖಚಿತ ಕಂಬಳಿ ತುಂಡು ತುಂಡಾಗಿತಲೆ ಪರಾಕ್""ಮುತ್ತಿನ ರಾಶಿ ಬಂಗಾರದ ರಾಶಿಯಾಗಿ ಮೂರು ತುಂಡಾದಿತಲೆ ಪರಾಕ್""ಮುತ್ತಿನ ಕೂಸು ಬರಬಂದಿತಲೇ ಪರಾಕ್"ಎಂದು ಮೂರು ಹಂತದಲ್ಲಿ ದೇವವಾಣಿ ನುಡಿಯಲಾಗಿದೆ.
ಇವುಗಳು ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಗೊರವಯ್ಯನ ಭವಿಷ್ಯವಾಣಿ ಕೇಳಲು ಸಾವಿರಾರು ಜನ ಭಕ್ತರು ಸೇರಿದ್ದರು.