ಧಾರವಾಡ: ಗರಗ ಮಡಿವಾಳೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದದ ನಡುವೆಯೂ ಪ್ರಶಾಂತ ದೇವರ ಪುರಪ್ರವೇಶ ಮಾಡಿದ್ದಾರೆ. ಪ್ರಶಾಂತ ದೇವರ ಜಂಗಮರಾಗಿರುವುದರಿಂದ ಅವರನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡುವುದಕ್ಕೆ ವೀರಶೈವ ಪಂಚಮಸಾಲಿ ಲಿಂಗಾಯತ ಒಕ್ಕೂಟದ ವಿವಿಧ ಮಠಾಧೀಶರಿಂದ ವಿರೋಧ ವ್ಯಕ್ತವಾಗಿತ್ತು. ಶನಿವಾರ ಮಠದ ಬಳಿ 25ಕ್ಕೂ ಹೆಚ್ಚು ಮಠಾಧೀಶರು ಪ್ರತಿಭಟನೆ ನಡೆಸಿದ್ದರು.
ಬಳಿಕ ಮಠದ ಆಡಳಿತ ಮಂಡಳಿ ಗರಗ ಹಂಗರಕಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಭೆ ಮಾಡಲಾಗಿತ್ತು. ಸಭೆಯಲ್ಲಿ ಒಮ್ಮತದ ನಿರ್ಧಾರವಾಗದ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಮಠಾಧೀಶರು ಜಿಲ್ಲಾಡಳಿತದ ಮೊರೆ ಹೋಗಿದ್ದರು. ಯಾವುದೇ ಕಾರಣಕ್ಕೂ ಪ್ರಶಾಂತ ದೇವರು ಗರಗ ಗ್ರಾಮ ಮತ್ತು ಮಠಕ್ಕೆ ಆಗಮಿಸದಂತೆ ನೋಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು.
ವಿರೋಧಿಸುವವರಿಗೆ ಭಕ್ತ ಸಮೂಹವೇ ಉತ್ತರ - ಪ್ರಶಾಂತ ದೇವರ : ಮಠಾಧೀಶರ ವಿರೋಧದ ಮಧ್ಯೆಯೂ ಪ್ರಶಾಂತ ದೇವರಿಗೆ ಗರಗ ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ. ಕುಂಭಮೇಳ ಸೇರಿದಂತೆ ಸಕಲವಾದ್ಯ ಮೇಳದೊಂದಿಗೆ ಗ್ರಾಮದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಮಠಕ್ಕೆ ಕರೆತರಲಾಯಿತು. ಮೆರವಣಿಗೆ ಬಳಿಕ ಗರಗ ಮಡಿವಾಳೇಶ್ವರ ಮಠದಲ್ಲಿ ಪ್ರಶಾಂತ ದೇವರ ಮಾಧ್ಯಮದವರೊಂದಿಗೆ ಮಾತನಾಡಿ, ಮಠ ಎಂದರೆ ಭಕ್ತರು, ಸ್ವಾಮೀಜಿಗಳ ನಡುವಿನ ಸಂಬಂಧ. ಇಲ್ಲಿನ ಭಕ್ತರು ಮೆರವಣಿಗೆ ಮೂಲಕ ಕರೆ ತಂದಿದ್ದಾರೆ. ಈ ಭಕ್ತ ಸಮೂಹವೇ ವಿರೋಧಿಸುವವರಿಗೆ ಉತ್ತರ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: Muharram: ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಹಬ್ಬಾಚರಣೆ
ನಾನು ವಿವಾದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ: ಗುರು ಬೇಕೆಂದರೆ ಭಕ್ತರು ನಿರ್ಣಯ ಮಾಡುತ್ತಾರೆ. ಭಕ್ತರು ಒಗ್ಗಟ್ಟಾಗಿದ್ದಾರೆ. ಭಕ್ತರ ಒಗ್ಗಟ್ಟಿನ ಶಕ್ತಿಯೇ, ಮಠ ಮತ್ತು ಸ್ವಾಮೀಜಿಯ ಶಕ್ತಿಯಾಗಿದೆ. ಮುಂದಿನ ಸವಾಲುಗಳಿಗೂ ಈ ಭಕ್ತ ಸಮೂಹವೇ ಉತ್ತರ ನೀಡಲಿದೆ. ಮುಂದಿನ ಸವಾಲುಗಳನ್ನು ಮಡಿವಾಳಜ್ಜ ಶಕ್ತಿ ಕೊಟ್ಟಂತೆ ನಡೆಸಿಕೊಂಡು ಹೋಗುತ್ತೇವೆ. ಸಮಾಜದಲ್ಲಿ ಎಲ್ಲರದೂ ಒಂದೇ ನಿಲುವು ಇರುವುದಿಲ್ಲ, ಬೇರೆ ಬೇರೆಯವರ ವಿಚಾರ ಬೇರೆ ಇರುತ್ತಾವೆ. ಮನುಷ್ಯ ಜಾತಿ ತಾನೊಂದೆ ವಲಂ ಎಂಬುದು ನಮ್ಮ ನಿಲುವು. ಅವರವರ ವಿಚಾರ ಅವರವರಿಗೆ ಬಿಟ್ಟಿದ್ದು, ನಾನು ವಿವಾದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಪೂಜೆ, ಅಧ್ಯಯನದ ಬಗ್ಗೆ ನಾನು ಹೆಚ್ಚು ಒತ್ತು ಕೊಡುವೆ ಎಂದರು.
ಮಡಿವಾಳೇಶ್ವರ ಟ್ರಸ್ಟ್ ಒಂದೇ ಕುಟುಂಬದ್ದಲ್ಲ: ಟ್ರಸ್ಟ್ ಒಂದೇ ಕುಟುಂಬಕ್ಕೆ ಸೇರಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಒಂದೇ ಕುಟುಂಬದ ಮಠ ಅಲ್ಲ, ಒಂದೇ ಕುಟುಂಬಕ್ಕೆ ಸೇರಿದ್ದರೇ ಇಷ್ಟು ಜನ ಬರುತ್ತಿದ್ದರಾ? ಪ್ರತಿಷ್ಠಿತ ಮಠ ಬೆಳೆಯಲು ಸವಾಲು ಇದ್ದೇ ಇರುತ್ತೆ. ಮಠಕ್ಕೆ ಹಿಂದೆಯೂ ಸವಾಲುಗಳಿದ್ದವು, ಮುಂದೆಯೂ ಸವಾಲುಗಳು ಬರುತ್ತಾವೆ. ಸವಾಲುಗಳಿಗೆ ಹೆಚ್ಚು ಪ್ರತಿಕ್ರಿಯೆ ನೀಡಲಾರೆವು. ಆದರೆ ಅವಕ್ಕೆಲ್ಲ ಭಕ್ತ ಸಮೂಹವೇ ಉತ್ತರ ಎಂದು ಹೇಳಿದರು.
ಇದನ್ನೂ ಓದಿ: 'ಹಿಂದೂ' ಎಂಬುದು ಧರ್ಮವೇ ಅಲ್ಲ, 'ಲಿಂಗಾಯತ'ವನ್ನು ಸ್ವತಂತ್ರ ಧರ್ಮವೆಂದು ಪರಿಗಣಿಸಿ: ಡಾ. ಸಿದ್ದರಾಮ ಸ್ವಾಮೀಜಿ