ಧಾರವಾಡ: ಉದಯಪುರದಲ್ಲಿ ನಿನ್ನೆ (ಮಂಗಳವಾರ) ನಡೆದ ಘಟನೆ ಇಡೀ ದೇಶ ತಲೆತಗ್ಗಿಸುವ ಹಾಗಾಗಿದೆ. ಪ್ರಜಾಪ್ರಭುತ್ವದ ಆಧಾರದ ಮೇಲೆ ನಮ್ಮ ದೇಶ ನಡೆಯುತ್ತಿದೆ. ಇಲ್ಲಿವರೆಗೆ ಕೆಲ ಕಿಡಿಗೇಡಿಗಳು ಸಂವಿಧಾನಕ್ಕೆ ಬೆಲೆಕೊಡದೆ, ನ್ಯಾಯಾಲಯವನ್ನು ಧಿಕ್ಕರಿಸಿ, ತಮ್ಮದೇ ತಾಲಿಬಾನಿಕರಣದಂತಹ ಕೃತ್ಯ ನಡೆಸುತ್ತಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಈ ಹತ್ಯೆಗೆ ಸರ್ಕಾರವೇ ಜವಾಬ್ದಾರಿಯಾಗಿದೆ. ಅಲ್ಲದೆ, ಇಡೀ ದೇಶದಲ್ಲಿ ಭಯೋತ್ಪಾದಕರನ್ನೇ ಕಾಂಗ್ರೆಸ್ ಬೆಳೆಸಿದೆ. ಧರ್ಮದ ಗುರುಗಳಿದ್ದಾರೆ ಅಥವಾ ಸಂಘಟನೆಗಳಿವೆ ಎಂದು ಆರೋಪಿಸಿದರು. ಒಂದು ತಿಂಗಳೊಗೆ ಹಂತಕರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಬುದ್ಧಿ ಜೀವಿಗಳೇ ಒಬ್ಬರಾದ್ರು ಮಾತಾಡಿ: ಈ ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸರ್ಕಾರ ನಾಟಕ ಮಾಡೋದನ್ನ ನಿಲ್ಲಿಸಬೇಕು. ಇಸ್ಲಾಮ್ ಮಾನಸಿಕತೆಯನ್ನ ನಿಲ್ಲಿಸಬೇಕು. ಅವರನ್ನ ಸಮುದಾಯದಿಂದ ಬಹಿಷ್ಕಾರ ಹಾಕಬೇಕು. ಧಾರವಾಡದಲ್ಲಿ ಕಲ್ಲಂಗಡಿ ಒಡೆದಿದ್ದಕ್ಕೆ ಹಾಹಾಕಾರ ಮಾಡಿದ್ರಿ. ಕುಮಾರಸ್ವಾಮಿ 10 ಸಾವಿರ ಕೊಟ್ಟು ದೊಡ್ಡ ರಾದ್ಧಾಂತ ಮಾಡಿದರು. ಈಗ ಏನು ಮಾಡ್ತೀರಿ?. ಬುದ್ಧಿ ಜೀವಿಗಳೇ ಒಬ್ಬರಾದ್ರು ಮಾತಾಡಿ ಎಂದು ಕಿಡಿಕಾರಿದರು.
ಪ್ರಕರಣದ ಹಿನ್ನೆಲೆ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡ ಆರೋಪದ ಮೇಲೆ ಇಬ್ಬರು ಕಿಡಿಗೇಡಿಗಳು ಉದಯ್ಪುರದಲ್ಲಿ ಟೈಲರ್ವೊಬ್ಬರನ್ನು ಶಿರಚ್ಛೇದ ಮಾಡಿದ್ದಾರೆ. ಅಲ್ಲದೇ, ಪ್ರಧಾನಿ ಮೋದಿಯವರಿಗೆ ಬೆದರಿಕೆ ಹಾಕಿದ್ದಾರೆ. ಸಂಪೂರ್ಣ ಘಟನೆಯನ್ನು ಇಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದರು.
ಓದಿ: ರಾಜಸ್ಥಾನ ಟೈಲರ್ ಶಿರಚ್ಛೇದ.. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪೈಶಾಚಿಕ ಕೃತ್ಯ ಎಂದ ಹೆಚ್ಡಿಕೆ