ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ನಾಲ್ವರಲ್ಲಿ ಯಾರು ಮೇಯರ್? ಎಂಬುವಂತ ಕುತೂಹಲ ಕೆರಳಿಸಿತ್ತು. ಇದೀಗ ಮೆಯರ್ ಸ್ಥಾನದಲ್ಲಿ ತಮ್ಮ ಬೆಂಬಲಿಗನನ್ನು ಕಣಕ್ಕಿಳಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೇಲುಗೈ ಸಾಧಿಸಿದ್ದಾರೆ.
ನಿನ್ನೆ ಖಾಸಗಿ ಹೊಟೆಲ್ನಲ್ಲಿ ನಡೆದ ಸಭೆಯಲ್ಲಿ ನಾಲ್ವರ ಹೆಸರು ಅಂತಿಮಗೊಂಡಿದ್ದು, ಅರವಿಂದ ಬೆಲ್ಲದ ಕ್ಷೇತ್ರದಿಂದ ವಿಜಯಾನಂದ ಶೆಟ್ಟಿ, ಅಮೃತ ದೇಸಾಯಿ ಕ್ಷೇತ್ರದಿಂದ ಈರೇಶ್ ಆಂಚಟಗೇರಿ, ಜಗದೀಶ್ ಶೆಟ್ಟರ್ ಕ್ಷೇತ್ರದಿಂದ ವೀರಣ್ಣ ಸವಡಿ, ಪೂರ್ವ ವಿಧಾನಸಭಾ ಕ್ಷೇತ್ರದಿಂದ ಶಿವು ಮೆಣಸಿನಕಾಯಿ ಹೆಸರು ಅಂತಿಮಗೊಂಡಿತ್ತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಬೆಂಬಲಿಗ ಈರೇಶ್ ಅಂಚಟಗೇರಿ ಹೆಸರು ಅಂತಿಮಗೊಂಡಿದೆ. ಧಾರವಾಡದ ವಾರ್ಡ್ ನಂ.4ರ ಈರೇಶ್ ಅಂಚಟಗೇರಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಹುಬ್ಬಳ್ಳಿಯ 44ನೇ ವಾರ್ಡ್ ಸದಸ್ಯೆ ಉಮಾ ಮುಕುಂದ ಉಪಮೇಯರ್ ಆಗಿ ಸ್ಪರ್ಧೆಗೆ ಇಳಿಯಲಿದ್ದಾರೆ. ಒಟ್ಟಿನಲ್ಲಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಇಳಿದಿರುವ ಇಬ್ಬರೂ ಜೋಶಿ ಬೆಂಬಲಿಗರಾಗಿದ್ದು, ನಾಲ್ವರು ನಾಯಕರ ಪೈಕಿ ಕೇಂದ್ರ ಸಚಿವ ಜೋಶಿ ಮೇಲುಗೈ ಸಾಧಿಸಿದಂತಾಗಿದೆ.
ಕಾಂಗ್ರೆಸ್ ಸೇರಿ ಇತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಪಾಲಿಕೆ ಚುನಾವಣೆ ಮೇಯರ್ ಉಪಮೇಯರ್ ಆಯ್ಕೆಯ ಹಿನ್ನೆಲೆ, ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ಮಯೂರ ಮೊರೆ, ಉಪಮೇಯರ್ ಸ್ಥಾನಕ್ಕೆ ದೀಪಾ ನೀರಲಕಟ್ಟಿ ನಾಮಪತ್ರ ಸಲ್ಲಿಸಿದ್ದು ಕಾಂಗ್ರೆಸ್ ಸದಸ್ಯರಿಗೆ ಅನೇಕ ಮುಖಂಡರು ಸಾಥ್ ನೀಡಿದ್ದಾರೆ. ಎಐಎಂಐಎಂದಿಂದ ಮೇಯರ್ ಸ್ಥಾನಕ್ಕೆ ನಜೀರ್ ಹೊನ್ನಾಳ, ಉಪಮೇಯರ್ ಸ್ಥಾನಕ್ಕೆ ವಹಿದಾಖಾನಂ ಕಿತ್ತೂರು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆಯ ಅವಧಿ ಪೂರ್ಣಗೊಂಡಿದೆ. ಇನ್ನೇನು ಕೆಲವು ಕ್ಷಣಗಳಲ್ಲಿ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಆಯ್ಕೆ ಮುನ್ನವೇ ಬಿಜೆಪಿ ಸಂಭ್ರಮ: ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಈರೇಶ್ ಅಂಚಟಗೇರಿ, ಉಪಮೇಯರ್ ಸ್ಥಾನಕ್ಕೆ ಉಮಾ ಮುಕುಂದ ನಾಮಪತ್ರ ಸಲ್ಲಿಕೆ ಮಾಡಲು ಆಗಮಿಸಿದ ವೇಳೆ ಮಾಧ್ಯಮದವರ ಕಡೆಗೆ ವಿಕ್ಟರಿ ಸಂಕೇತ ತೋರಿಸುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಶಾಸಕ ಅಮೃತ ದೇಸಾಯಿ, ಬಿಜೆಪಿ ಪ್ರಮುಖರ ಜೊತೆ ಆಗಮಿಸಿದ ಅಭ್ಯರ್ಥಿಗಳು ಪಾಲಿಕೆ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ: ಮೇಯರ್-ಉಪಮೇಯರ್ ಆಯ್ಕೆಗೆ ಕ್ಷಣಗಣನೆ: ಯಾರಾಗ್ತಾರೆ ಹು-ಧಾ ಪಾಲಿಕೆಗೆ ಸಾರಥಿ?