ಧಾರವಾಡ : ಈ ಹಿಂದಿನ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದು ಸಿದ್ದರಾಮಯ್ಯ ಅಲ್ಲ, ಬೆಂಬಲ ಕೊಟ್ಟಿದ್ದು ಕಾಂಗ್ರೆಸ್ ಹೈಕಮಾಂಡ್ ಎಂದು ಮಾಜಿ ಮುಖ್ಯಮಂತ್ರಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ತರಾತುರಿಯಲ್ಲಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದರು. 'ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?'. ಹಾಗಂತ ಸಿದ್ದರಾಮಯ್ಯನನ್ನು ಕಾಂಗ್ರೆಸ್ ಕೇಳಿಲ್ಲ. ಹೈಕಮಾಂಡ್ ಮಾಡಿದ್ದನ್ನು ತಮ್ಮ ಕ್ರೆಡಿಟ್ಗೆ ತೆಗೆದುಕೊಳ್ಳೋದು ಬೇಡ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಅವರ ಮಧ್ಯೆ ನಡೆದಿರುವ ಟ್ವೀಟ್ ವಾರ್ ಬಗ್ಗೆ ನಾನು ಹೆಚ್ಚು ಹೇಳಲಾರೆ. ಕಾಂಗ್ರೆಸ್ ಬೀಳುವುದರಲ್ಲಿ ಸಿದ್ದರಾಮಯ್ಯನವರ ಪಾತ್ರವೂ ಇದೆ ಅಂತಾ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಅದಕ್ಕೆ ಸರ್ಮಥವಾದ ಉತ್ತರ ಕೊಡುವುದು ಸಿದ್ದರಾಮಯ್ಯ ಜವಾಬ್ದಾರಿಯಾಗಿದೆ ಎಂದು ಜಾಣತನದ ಹೇಳಿಕೆ ನೀಡಿದರು.
ಇದನ್ನೂ ಓದಿ : ಅದೂ ಬೇಕು, ಇದೂ ಬೇಕು ಎಂದು ಪಟ್ಟು ಹಿಡಿದ್ರಾ ಸಿದ್ದು?... ಮಾಜಿ ಸಿಎಂ ಹಠ, ಹೈಕಮಾಂಡ್ಗೆ ಸಂಕಟ
ಸಿ.ಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್ ಯಾರ ಪರವಾಗಿಯೂ ಇಲ್ಲ. ಅಧಿಕಾರ, ಭ್ರಷ್ಟಾಚಾರ, ದಲ್ಲಾಳಿಗಳ ಪರ ಇದೆ. ದೇಶದ ತುಕಡೇ-ತುಕಡೇ ಗ್ಯಾಂಗ್ ಜೊತೆ ಕಾಂಗ್ರೆಸ್ ಇದೆ. ಅವರೆಂದೂ ಅಲ್ಪಸಂಖ್ಯಾತರ ಪರ ಇಲ್ಲ. ಮುಸ್ಲಿಂ-ಹಿಂದೂ ಮಾತ್ರವಲ್ಲ, ಪ್ರಜಾಪ್ರಭುತ್ವದ ಪರವೂ ಇಲ್ಲ.
23 ಜನ ಎಲೆಕ್ಟೆಡ್ ಅಧ್ಯಕ್ಷರನ್ನು ಮಾಡ್ರಿ ಅಂದ್ರೆ ಅಪಾಯಿಂಟ್ಮೆಂಟ್ ಸಿಗ್ತಿಲ್ಲ, ಗುಲಾಮ್ ನಬಿ ಆಜಾದ್ ಅವರಂತಹ ಹಿರಿಯರಿಗೂ ಅಪಾಯಿಂಟ್ಮೆಂಟ್ ಕೊಡುತ್ತಿಲ್ಲ. ಇಂತಹದ್ದಲ್ಲದೇ ದೇಶ ಮತ್ತು ರಾಜ್ಯದಲ್ಲಿ ರೈತರನ್ನು ತಪ್ಪು ದಾರಿಗೆ ಎಳಿಯುತ್ತಿದ್ದಾರೆ. ಕೆಲ ರೈತರನ್ನು ಮುಂದೆ ಬಿಟ್ಟು ಷಡ್ಯಂತ್ರ ನಡೆಸಿದ್ದಾರೆ. ಈಗ ವಿರೋಧ ಮಾಡುವವರೇ ಹಿಂದೆ ಎಪಿಎಂಸಿ ಮುಕ್ತ ಮಾಡಿ ಅಂತಾ ಕೇಳಿದ್ದರು ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.