ಹುಬ್ಬಳ್ಳಿ: ಸಂಸದ ಪ್ರಹ್ಲಾದ್ ಜೋಶಿಯವರು ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ನಗರದ ಇಂದಿರಾ ಗಾಜಿನಮನೆಯಲ್ಲಿ ವಾಯುವಿಹಾರಿಗಳ ಬಳಿ ಮತಯಾಚನೆ ನಡೆಸಿದರು.
ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ನಿರ್ಣಾಮವಾಗುತ್ತಿದೆ. ಅವರು ಹೆಚ್ಚಿನ ಕ್ಷೇತ್ರಗಳಿಗೆ ಬಂದು ಪ್ರಚಾರ ಮಾಡುವಂತೆ ಕಳಕಳಿಯಿಂದ ಕೇಳುತ್ತೇನೆ. ಕಾಂಗ್ರೆಸ್ ಮುಕ್ತ ಭಾರತದತ್ತ ಅವರು ದಾಪುಗಾಲು ಹಾಕುತ್ತಿದ್ದಾರೆ. ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂಬುದು ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ಆ ಕನಸು ಈಡೇರಿಸುತ್ತಿರುವ ರಾಹುಲ್ ಗಾಂಧಿಗೆ ನಾನು ಅಭಿನಂದಿಸುತ್ತೇನೆ.
ರಾಹುಲ್ ಗಾಂಧಿ ಧಾರವಾಡ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಲಿ. ಇಲ್ಲಿ ಕೂಡ ಕಾಂಗ್ರೆಸ್ ನಿರ್ಮೂಲನೆಯಾಗುತ್ತೆ ಎಂದು ಜೋಶಿ ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ ನೀತಿ, ನಿಯಮ ನಿಯತ್ತು ಇಲ್ಲ. ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕದಂತೆ ಕಮ್ಯುನಿಷ್ಟ್ ಪಾರ್ಟಿ ಧಮ್ಕಿ ಹಾಕಿದೆ. ನನ್ನ ಕೆಲಸ ನೋಡಿ ಮತ್ತು ದೇಶದ ಹಿತದೃಷ್ಟಿಯಿಂದ ಮತ ಹಾಕಿ ಎಂದು ಜನರನ್ನು ಕೇಳುತ್ತಿದ್ದೇನೆ. ಹೋದಲ್ಲೆಲ್ಲ ಬಿಜೆಪಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ ಸಂಸದ ಪ್ರಹ್ಲಾದ್ ಜೋಶಿಯವರು ವಾಯುವಿಹಾರ ಮಾಡುವವರ ಬಳಿ ತೆರಳಿ ಬಿಜೆಪಿಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದರು. ಬಳಿಕ ವಾಯು ವಿಹಾರಿಗಳ ಜೊತೆ ಟೆನಿಸ್ ಆಡವಾಡಿ ಎಂಜಾಯ್ ಮಾಡಿದರು.