ಹುಬ್ಬಳ್ಳಿ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಗುರುವಾರ ತಿರುಪತಿಗೆ ತೆರಳಿ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಜೋಶಿ, ಮತದಾನ ಮುಗಿದ ಬಳಿಕ ತಿರುಪತಿಗೆ ಪ್ರಯಾಣ ಬೆಳೆಸಿದ್ದರು. ಸಚಿವರು ಕಾಲ್ನಡಿಗೆಯ ಮೂಲಕವೇ ಸಾಗಿ ದೇವರ ದರ್ಶನ ಪಡೆದಿದ್ದು ವಿಶೇಷವಾಗಿತ್ತು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿತ್ತು. ಮೂರು ದಶಕಗಳಿಂದ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದರು. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ವಿಚಲಿತರಾಗಿರುವ ಬಿಜೆಪಿ ನಾಯಕರು ಹೇಗಾದ್ರೂ ಮಾಡಿ ಮತ್ತೆ ಕ್ಷೇತ್ರ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದರು. ರಾಷ್ಟ್ರೀಯ ನಾಯಕರು ಹಾಗೂ ಸ್ಥಳೀಯ ನಾಯಕರ ಹೋರಾಟದ ನಂತರ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಶೆಟ್ಟರ್ ವಿರುದ್ದ ಅಭ್ಯರ್ಥಿ ಮಹೇಶ ಟೆಂಗಿನಕಾಯಿಗಿಂತಲೂ ಪ್ರಹ್ಲಾದ್ ಜೋಶಿ ಚುನಾವಣೆಯನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಹೀಗಾಗಿ ಗೆಲುವಿಗಾಗಿ ಜೋಶಿ ಮೆಟ್ಟಿಲುಗಳನ್ನು ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು ಎನ್ನಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಹೈವೋಲ್ಟೆಜ್ ಕ್ಷೇತ್ರವಾಗಿದೆ. ಉತ್ತರ-ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕೆಂಬ ಉದ್ದೇಶದಿಂದ ಬಿಜೆಪಿ ನಾಯಕರು ಸಾಕಷ್ಟು ರಣತಂತ್ರ ಹೆಣೆದಿದ್ದರು. ಶೆಟ್ಟರ್ ಬಿಜೆಪಿ ತೊರೆದಾಗಿನಿಂದಲೂ ಜೋಶಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪರೋಕ್ಷವಾಗಿಯೇ ಲೋಕಸಭಾ ಚುನಾವಣೆಯಲ್ಲಿ ಜೋಶಿ ವಿರುದ್ಧ ತೊಡೆ ತಟ್ಟುವ ಮುನ್ಸೂಚನೆಯನ್ನೂ ಅವರು ನೀಡಿದ್ದಾರೆ.
ಈ ಚುನಾವಣೆಯಲ್ಲಿ ಶೆಟ್ಟರ್ ಗೆದ್ದರೆ ಅವರ ವರ್ಚಸ್ಸು ಮತ್ತಷ್ಟು ಹೆಚ್ಚುತ್ತದೆ. ಈಗಾಗಿ ಚುನಾವಣೆಯಲ್ಲಿ ಶೆಟ್ಟರ್ ಸೋಲಿಸಲೇಬೇಕೆಂದು ಜೋಶಿ ಪಣ ತೊಟ್ಟಿದ್ದಾರೆ. ಶೆಟ್ಟರ್ ಗೆದ್ದರೇ ಬಿಜೆಪಿಗೆ ಬಹುದೊಡ್ಡ ಹಿನ್ನೆಡೆಯಾಗುತ್ತದೆ, ಪಕ್ಷಕ್ಕೂ ಮುಜುಗರ ಆಗುತ್ತೆ ಎಂದು ಕಮಲ ಪಡೆಯ ರಾಷ್ಟ್ರೀಯ ನಾಯಕರು ರಣತಂತ್ರ ಹೆಣೆದಿದ್ದರು.
ಇದನ್ನೂ ಓದಿ: ಕಾಂಗ್ರೆಸ್‌ನವರ ರೆಸಾರ್ಟ್ ರಾಜಕೀಯದ ಮಾತು ಹಾಸ್ಯಾಸ್ಪದ: ಬಿ.ಸಿ.ಪಾಟೀಲ್