ಹುಬ್ಬಳ್ಳಿ: ಧಮ್ಕಿ ಹಾಕುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಸ್ಕೃತಿ, ಕಾರ್ಯಕರ್ತರಿಗೆ ಹೊಡೆಯುವುದು ಮಾಜಿ ಸಿದ್ದರಾಮಯ್ಯ ಅವರ ಸಂಸ್ಕೃತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳಿಗೆ ಧಮ್ಕಿ ಹಾಕಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಂಸ್ಕೃತಿಕ, ಭಾರತೀಯ ಹಿಂದೂ ಸಂಸ್ಕೃತಿಯನ್ನು ಬಿಜೆಪಿ ಪಾಲಿಸಿಕೊಂಡು ಬಂದಿದೆ ಎಂದರು.
ಡಿ ಕೆ ಶಿವಕುಮಾರ್ ಸಂಸ್ಕೃತಿ ಗೂಂಡಾ ಸಂಸ್ಕೃತಿ- ಜೋಶಿ.. ಪಂಚಮಸಾಲಿ ಸಮುದಾಯದ ಹೋರಾಟ ಮುಂದುವರಿಸುವ ಯೋಚನೆ ಕಾಂಗ್ರೆಸ್ನವರದಾಗಿತ್ತು. ಈಗ ಬಿಜೆಪಿ ಸರ್ಕಾರ ಎಲ್ಲ ಮೀಸಲಾತಿ ಸಮಸ್ಯೆಯನ್ನು ಪರಿಹರಿಸಿ ತಾರ್ಕಿಕ ಅಂತ್ಯ ಹಾಡಿದೆ. ಡಿ.ಕೆ. ಶಿವಕುಮಾರ್ ಸಂಸ್ಕೃತಿ ಗೂಡಾ ಸಂಸ್ಕೃತಿಯಾಗಿರುವುದು ಜಗತ್ತಿಗೆ ಗೊತ್ತಿದೆ ಎಂದು ಕುಟುಕಿದರು. ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪ ಶ್ರೀಗಳಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದ ಅವರು, ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ನೀಡಿರುವುದು ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಸಹಮತವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಜೋಶಿ ಆರೋಪಿಸಿದರು.
ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಅವರೆಲ್ಲರೂ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾತ್ರ ಹೋರಾಟದಲ್ಲಿ ಭಾಗಿಯಾಗಿದ್ದರು. ಇದರ ಜೊತೆಗೆ ಅವರಿಗೆ ಸದಾಶಿವ ಆಯೋಗ ಒಪ್ಪುವಂತಹ, ಸಮಸ್ಯೆ ಬಗೆಹರಿಸುವ ತಾಕತ್ತು ಇರಲಿಲ್ಲ. ತಮ್ಮ ಕಾಲದಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ನೀಡಿದ್ದರು. ಧರ್ಮದ ಆಧಾರದ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿರ್ಣಯವಾಗಿದೆ. ಬಿಜೆಪಿಯದ್ದು ನಿರ್ಣಾಯಕ ಸರ್ಕಾರವಾಗಿದೆ. ನಮ್ಮ ಪಕ್ಷದ ಬದ್ಧತೆ ಸ್ಪಷ್ಟವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇನೆ ಎಂದು ಹೇಳುತ್ತಿದ್ದು, ಬಂದರೆ..!, ಅದರ ಅರ್ಥ ಅವರು ಅಧಿಕಾರಕ್ಕೆ ಬರವುದಿಲ್ಲ ಅನ್ನೋದು ಗ್ಯಾರಂಟಿಯಾಗಿ ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಇಲ್ಲಿವರೆಗೆ ಕ್ಷೇತ್ರದ ಆಯ್ಕೆ ಮಾಡಲು ಆಗಿಲ್ಲ. ಕಳೆದ ಬಾರಿ ಬಾದಾಮಿಯಲ್ಲಿ 1500 ವೋಟ್ ಬೀಳದಿದ್ದರೆ ಅವರು ಮಾಜಿ ಮುಖ್ಯಮಂತ್ರಿ ಅಲ್ಲ, ಮಾಜಿ ಶಾಸಕರಾಗಿರುತ್ತಿದ್ದರು. 11 ಬಜೆಟ್ ಮಂಡಿಸಿದವರಿಗೆ ಒಂದು ಕ್ಷೇತ್ರವಿಲ್ಲ. ಗೆಲ್ಲುವ ವಿಶ್ವಾಸ ಅವರಿಗೆ ಇಲ್ಲ ಎಂದು ಪ್ರಹ್ಲಾದ್ ಜೋಶಿ ಟೀಕಿಸಿದರು.
1248 ಜಿ+3 ಮಾದರಿ ಮನೆಗಳ ನಿರ್ಮಾಣ ಕಾಮಗಾರಿಗೆ ಜೋಶಿ ಚಾಲನೆ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಹುಬ್ಬಳ್ಳಿಯ ತಾರಿಹಾಳ ಸೇತುವೆ ಬಳಿ ಜಿ+3 ಮಾದರಿ ಮನೆಗಳ ನಿರ್ಮಾಣದ ಭೂಮಿ ಪೂಜೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರು ನೆರವೇರಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದ ಹಿಂಬಾಗದಲ್ಲಿರುವ ಖಾಲಿ ನಿವೇಶನದಲ್ಲಿ 1248 ಜಿ+3 ನಿರ್ಮಾಣದ ಕಾಮಗಾರಿ ಭೂಮಿ ಪೂಜೆಯ ಕಾರ್ಯಕ್ರಮ ನೆರವೇರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕಾರ್ಯಕ್ರಮ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇನ್ನೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಇದನ್ನೂ ಓದಿ: ಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ