ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ ಜೋಶಿ 4 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು.
ನಗರದ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಬೃಹತ್ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಜಿಲ್ಲಾ ಚುನಾವಣಾ ಅಧಿಕಾರಿ ದೀಪಾ ಚೋಳನ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
ತಮ್ಮ ಅಪಾರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿದ ಸಂಸದ ಜೋಶಿ ಅವರಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ ಸೇರಿದಂತೆ ಜೋಶಿ ಕುಟುಂಬ ಹಾಗೂ ಪಕ್ಷದ ಮುಖಂಡರು ಸಾಥ್ ನೀಡಿದರು.
ಮೆರವಣಿಗೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಮೋದಿ ಪರ ಜೈಕಾರ ಹಾಕಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಹ್ಲಾದ ಜೋಶಿಯವರು ಧಾರವಾಡದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದರು.
ಅಲ್ಲದೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ರಾಜಶೇಖರಯ್ಯ ವಿ.ಕಂತಿಮಠ ಹಾಗೂ ಮಾರುತಿ ರಾಮಪ್ಪ ಹನಸಿ, ಮಕ್ತುಂಖಾನ್ ಸರ್ದೇಸಾಯಿ ನಾಮಪತ್ರ ಸಲ್ಲಿಸಿದರು.