ಹುಬ್ಬಳ್ಳಿ: ಕೋವಿಡ್ ಲಸಿಕೆ ವಿರುದ್ಧ ಕಾಂಗ್ರೆಸ್ನವರು 58ಕ್ಕೂ ಅಧಿಕ ಬಾರಿ ಸುಳ್ಳು ಹೇಳಿಕೆ ನೀಡಿದ್ದಾರೆ. ಕೋವಿಡ್ಗೆ ಕಾಂಗ್ರೆಸ್ ಏನು ಕೊಡುವುದಿದೆ ಬದನೆಕಾಯಿ. ಕೋವಿಡ್ ಸಂದರ್ಭದಲ್ಲಿಯೂ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. 100 ಕೋಟಿ ಕೊಡುವುದಾಗಿ ಹೇಳಿದೆ. ಆದರೆ, ಅದು ಎಂಪಿ, ಎಂಎಲ್ಎ ಫಂಡ್ ಆಗಿದ್ದು, ಅದು ಸರ್ಕಾರದ್ದು ಎಂದು ಕಾಂಗ್ರೆಸ್ ವಿರುದ್ಧ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ವರ್ಷ ಸಂಸದರ ನಿಧಿಯನ್ನು ಕೋವಿಡ್ಗೆ ಬಳಸಿಕೊಳ್ಳುವ ನಿರ್ಧಾರವಾಗಿದೆ. ಅದೇ ರೀತಿ, ರಾಜ್ಯದಲ್ಲಿಯೂ ಶಾಸಕರ ನಿಧಿ ಕೊರೋನಾಕೆ ಬಳಸಲು ತೀರ್ಮಾನಿಸಲಾಗಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದವರೇನು ಬದನೆಯಕಾಯಿ ಕೊಡುತ್ತಾರೆ ಎಂದು ವ್ಯಂಗ್ಯ ಮಾಡಿದರು.
ಕಾಂಗ್ರೆಸ್ ನಾಯಕರು ಹುಚ್ಚುಚ್ಚು ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ ವ್ಯಾಕ್ಸಿನ್ಗೆ ಸಂಬಂಧಿಸಿದಂತೆ 58 ಬಾರಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೆ ನೀಡಿದ್ದರು. ರಾಜಕಾರಣದಲ್ಲಿ ಮಾತನಾಡುವುದಕ್ಕೆ ಏನೂ ಇಲ್ಲ ಅಂತ ಕೋವಿಡ್ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ತಜ್ಞರ ಜೊತೆಗೆ ಚರ್ಚಿಸಿ ಮಾತನಾಡಲಿ. ಅದನ್ನು ಬಿಟ್ಟು ರಾಹುಲ್ ಗಾಂಧಿ ಅಂತಹವರ ಮಾತು ಕೇಳಿ ಹೇಳಿಕೆ ನೀಡಬಾರದು. ರಾಹುಲ್ ಗಾಂಧಿಗೆ ಏನೂ ತಿಳಿಯಲ್ಲ ಪಾಪ ಅಂಥವರ ಮಾತು ಕಟ್ಟಿಕೊಂಡು ಹೇಳಿಕೆ ನೀಡಬೇಡಿ ಎಂದು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.
ಮುಖ್ಯಮಂತ್ರಿಗಳ ಕೋವಿಡ್ ಪ್ಯಾಕೇಜ್ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ಯಾಕೇಜ್ ನಿಜಕ್ಕೂ ಸ್ವಾಗತಾರ್ಹವಾಗಿದೆ. ಇನ್ನೂ ಪ್ಯಾಕೇಜ್ ಕುರಿತು ಕಾಂಗ್ರೆಸ್ ಹೇಳಿಕೆ ಖಂಡನೀಯವಾಗಿದೆ. ಕಾಂಗ್ರೆಸ್ ನಾಯಕರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ಉದ್ಯೋಗ ಇಲ್ಲದವರು ಮನಸ್ಸಿಗೆ ಬಂದಂತೆ ಏನಾದರು ಮಾತನಾಡುತ್ತಲೇ ಇರುತ್ತಾರೆ ಎಂದರು.