ಹುಬ್ಬಳ್ಳಿ : ಮೂರು ಸಾವಿರ ಮಠದಿಂದ ಕೆಎಲ್‌ಇ ಸಂಸ್ಥೆಗೆ ದಾನವಾಗಿ ಕೊಟ್ಟ ಆಸ್ತಿಯನ್ನು ಮರಳಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರು ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ ಮಠಗಳು ಭಕ್ತರ ಮಠಗಳು. ಇವು ಭಕ್ತರಿಂದಲೇ ಸ್ಥಾಪಿತವಾದ ಮಠಗಳು. ಮೂರು ಮಠದಲ್ಲಿ ಯಾರು ಮುಂದಿನ ಸ್ವಾಮೀಜಿಯಾಗಬೇಕು ಅನ್ನೋ ವಿಚಾರದಲ್ಲಿ ಜಗಳ ನಡೆಯುತ್ತಿದೆ. ಇದಕ್ಕೆ ನಮ್ಮ ಸಂಸ್ಥೆಯನ್ನ ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ವಿಚಾರ ಇರಲಿಲ್ಲ. ಈ ಕುರಿತು ನಾವು ಮೂರು ಸಾವಿರ ಮಠದ ಪೀಠಾಧ್ಯಕ್ಷರಿಗೆ 2003ರಲ್ಲಿಯೇ ಕೇಳಿದ್ದೆವು. ನಮ್ಮದೊಂದು ವಿವಾದ ಇರೋ ಭೂಮಿಯಿದೆ, ಅದನ್ನ ಬಿಡಿಸಿಕೊಟ್ಟರೆ ಅಲ್ಲಿ ನೀವು ಕಾಲೇಜು ಕಟ್ಟಬಹುದು ಎಂದು ಹೇಳಿದ್ದರು.
ಅಂದಿನ ಸ್ವಾಮೀಜಿ ಗಂಗಾಧರ ಸ್ವಾಮೀಜಿಗಳಿಗೆ ಈ ಕುರಿತು ಮನವಿ ಮಾಡಿಕೊಂಡಿದ್ದರಿಂದ ಅವರು, ಸುಮಾರು 23 ಎಕರೆಯಷ್ಟು ನಮಗೆ ಬಿಟ್ಟು ಕೊಟ್ರು. ಅದಕೆಲ್ಲಾ ಕೆಎಲ್ಇನೇ ಖರ್ಚು, ವೆಚ್ಚ ನೀಡಿತ್ತು. ಹೀಗಾಗಿ, ಅಂದಿನ ಸ್ವಾಮೀಜಿ ನಮಗೆ ದಾನದ ರೂಪದಲ್ಲಿ ಆ ಭೂಮಿಯನ್ನ ನೀಡಿದ್ರು. ಆದ್ರೆ, ಕೆಎಲ್‌ಇಗೆ ಪರಭಾರೆ ಮಾಡಿದ್ರು ಅಂತಾ ಆರೋಪ ಮಾಡಿದ್ದಾರೆ ಎಂದರು.
ಓದಿ: ಮೀಸಲಾತಿಯಲ್ಲಿ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲಾಗುವುದು; ಸಚಿವ ಗೋಪಾಲಯ್ಯ
ರಾಜ್ಯದಲ್ಲಿ ಎಷ್ಟೋ ಮಠಗಳ ಆಸ್ತಿ ಪರಭಾರೆ ಆಗಿದೆ. ಅದರ ಬಗ್ಗೆ ಇವರಿಗೆ ಕಳಕಳಿ ಇಲ್ಲ. ಚಿತ್ರದುರ್ಗ ಮಠದ ಆಸ್ತಿ ಎಷ್ಟಿತ್ತು ಅಂತಾ ಅವರಿಗೆ ಗೊತ್ತಾ? ಮೂರು ಸಾವಿರ ಮಠ ನಮಗೆ ಭೂಮಿ ದಾನ ಮಾಡಿ 17 ವರ್ಷ ಆಯಿತು. ಅಲ್ಲಿಯತನಕ ಈ ಸ್ವಾಮೀಜಿ ಎಲ್ಲಿಗೆ ಹೋಗಿದ್ದರು ಎಂದು ದಿಂಗಾಲೇಶ್ವರ ಶ್ರೀಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ದಿಂಗಾಲೇಶ್ವರನನ್ನು ನಾವು ಸ್ವಾಮೀಜಿ ಅಂತಾ ಒಪ್ಪಿಲ್ಲ : ಈ ಸ್ವಾಮೀಜಿಯ ವಿಷಯ ನಂಗೆ ಗೊತ್ತಿಲ್ಲ. ನಮಗೆ ಮಠದ ಉನ್ನತ ಸಮಿತಿ ಯಾವುದೇ ಆಸ್ತಿ ನೀಡಿಲ್ಲ. ಅವರನ್ನು ಸ್ವಾಮಿ ಅಂತಾ ನಾವ್ ಒಪ್ಪೇ ಇಲ್ಲ. ಆ ಮಹಾಪುರುಷನ ಮುಖಾನೂ ನೋಡಿಲ್ಲ. ಹಾದಿಲಿ ಹೋಗೋ ಸ್ವಾಮಿ ಮಾತನಾಡ್ತಾನೆ ಅಂದ್ರೆ, ನಾನ್ ಉತ್ತರ ಕೊಡಲ್ಲ ಎಂದು ದಿಂಗಾಲೇಶ್ವರ ಶ್ರೀಗಳ ವಿರುದ್ದ ಗರಂ ಆದರು.