ಹುಬ್ಬಳ್ಳಿ: ಕಿಮ್ಸ್ಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಪೌಡರ್ ಪೂರೈಕೆ ಆಗದ ಕಾರಣ ಮೂಳೆ ಮುರಿತ - ಬಿರುಕು ಮುಂತಾದ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬ್ಯಾಂಡೇಜ್ ಮಾಡಿಸಿಕೊಳ್ಳಲು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಆರ್ಥೋಪೆಡಿಕ್ ವಿಭಾಗಕ್ಕೆ ಬರುತ್ತಿರುವ ಜಿಲ್ಲೆಯ ಗ್ರಾಮೀಣ ಭಾಗ ಹಾಗೂ ಹೊರ ಜಿಲ್ಲೆಗಳ ರೋಗಿಗಳು ಬಂದ ದಾರಿಗೆ ಸುಂಕ ಇಲ್ಲದೆ ಮರಳುವಂತಾಗಿದೆ.
ಒಂದು ವಾರದಿಂದ ಇದೇ ಸ್ಥಿತಿ ಇದ್ದು, ರೋಗಿಗಳಿಗೆ ಬ್ಯಾಂಡೇಜ್ ಮಾಡದೆ ವಾಪಸ್ ಕಳುಹಿಸಲಾಗುತ್ತಿದೆ. ಮೆಡಿಕಲ್ ಸ್ಟೋರ್‌ನಿಂದ ಪಿಒಪಿ ತರುವವರಿಗೆ ಮಾತ್ರ ಬ್ಯಾಂಡೇಜ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಆರೋಪವನ್ನು ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣ್ ಕುಮಾರ್ ತಳ್ಳಿಹಾಕಿದ್ದಾರೆ.