ಹುಬ್ಬಳ್ಳಿ : ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಇಂದು ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು. ತುರ್ತು ಪ್ರಕರಣ ಎಂದು ಪರಿಗಣಿಸಿ ನ್ಯಾಯಾಲಯವು ಮಧ್ಯಾಹ್ನ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತು.
ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲ ಸಂಜೀವ್ ಬಡಸ್ಕರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರದವರೆಗೆ ಅವಕಾಶ ನೀಡಿತು. ಈ ಸಂಬಂಧ ಶಹರ್ ಠಾಣೆ ಪೊಲೀಸರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದು, ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆರೋಪಿಯು ಕಳೆದ 31 ವರ್ಷದಿಂದ ತಲೆಮರೆಸಿಕೊಂಡಿದ್ದು, ಈ ಹಿನ್ನೆಲೆ ಜಾಮೀನು ನೀಡಬಾರದು ಎಂದು ಸರ್ಕಾರಿ ಪರ ವಕೀಲರು ವಾದ ಮಂಡಿಸಿದರು.
ಶ್ರೀಕಾಂತ್ ಪರ ವಕೀಲರು ವಾದ ಮಂಡಿಸಿ, ಶ್ರೀಕಾಂತ್ ಪೂಜಾರಿ ಎಲ್ಲಿಯೂ ಹೋಗಿಲ್ಲ. ಕಳೆದ 40 ವರ್ಷದಿಂದ ಒಂದೇ ವಿಳಾಸದಲ್ಲಿದ್ದಾರೆ. ಈಗಾಗಲೇ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಜೊತೆಗೆ ವಿಚಾರಣೆಗೆ ಕರೆದಾಗ ಪೊಲೀಸರ ಮುಂದೆಯೂ ಹಾಜರಾಗಿದ್ದಾರೆ. ಈ ಸಂಬಂಧ ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದರು.
ಪ್ರತಿಯಾಗಿ ಸರ್ಕಾರಿ ವಕೀಲರು, ಆರೋಪಿತರ ಮೇಲೆ ಹುಬ್ಬಳ್ಳಿ ನಗರದ ವಿವಿಧ ಠಾಣೆಗಳಲ್ಲಿ 13 ಕ್ರಿಮಿನಲ್ ಪ್ರಕರಣಗಳು, 3 ಮುಂಜಾಗ್ರತಾ ಕ್ರಮಗಳು ಸೇರಿ ಒಟ್ಟು 16 ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿ ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಸದರಿ ಜಾಮೀನು ನೀಡಿದರೆ ಮತ್ತೆ ನ್ಯಾಯಾಲಯಕ್ಕೆ ಗೈರಾಗುವ ಸಂಭವ ಇರುತ್ತದೆ. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದೆ.
ಇದನ್ನೂ ಓದಿ : ಬಿಜೆಪಿ ರಾಜ್ಯ ವಕ್ತಾರ, ಮಾಧ್ಯಮದ ಘಟಕ ಪುನಾರಚನೆ ಮಾಡಿದ ಬಿ ವೈ ವಿಜಯೇಂದ್ರ