ಹುಬ್ಬಳ್ಳಿ: ಕೊರೊನಾ ಅಬ್ಬರ ಧಾರವಾಡ ಜಿಲ್ಲೆಯ ಜನರನ್ನು ಮೃತ್ಯುರೂಪದಲ್ಲಿ ಕಾಡಲಾರಂಭಿಸಿದೆ. ಕಳೆದ 15 ದಿನಗಳಲ್ಲಿ ಸೋಂಕಿತರು ಹಾಗೂ ಕೋವಿಡ್‌ಗೆ ಬಲಿಯಾಗುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಮೇ ತಿಂಗಳಲ್ಲಿ ಜನರು ಸ್ವಯಂಜಾಗೃತಿ ವಹಿಸದೇ ಇದ್ದರೆ ಇನ್ನೂ ದೊಡ್ಡ ಅಪಾಯ ಎದುರಾಗುವ ಆತಂಕವಿದೆ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಪಾಯಕಾರಿಯಾಗಿ ಕೋವಿಡ್ ರೂಪಾಂತರಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಅದರಲ್ಲೂ ಮೇ ತಿಂಗಳು ಕೊರೊನಾ ವೈರಸ್ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ದೈಹಿಕ ಅಂತರದ ಜೊತೆಗೆ ಮಾಸ್ಕ್ ಧರಿಸಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ತಾವೇ ಕಾಳಜಿ ವಹಿಸಬೇಕು. ಇಲ್ಲದೇ ಹೋದಲ್ಲಿ ಸಾವು- ನೋವು ಸಂಭವಿಸುವ ಸಾಧ್ಯತೆಗಳೂ ಇವೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲಾಡಳಿತ ಜಾಗೃತಿ ಮೂಡಿಸುತ್ತಿದೆ.
ಆದರೂ ಹಲವೆಡೆ ಕೆಲವರು ಕಾಟಾಚಾರಕ್ಕೆ ಎಂಬಂತೆ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿರುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷವಿಡೀ 2020 ಏಪ್ರಿಲ್‌ನಿಂದ 2021 ಏಪ್ರಿಲ್ ಮೊದಲ ವಾರದವರೆಗೆ ಕೊರೊನಾ ಸೋಂಕಿತರ ಸಂಖ್ಯೆ 23 ಸಾವಿರದ ಗಡಿಯಲ್ಲಿ ಇತ್ತು. ಆದರೆ, ಕಳೆದ 23 ದಿನಗಳಲ್ಲಿ ಬರೋಬ್ಬರಿ 7,016 ಜನರಿಗೆ ಸೋಂಕು ದೃಢಪಟ್ಟಿದೆ. 70 ಜನ ಮೃತಪಟ್ಟಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಸೋಂಕು ವೇಗವಾಗಿ ಹರಡುತ್ತಿರುವುದನ್ನು ಆರೋಗ್ಯ ಇಲಾಖೆಯ ಅಂಕಿ ಸಂಖ್ಯೆ ಗಳು ದೃಢಪಡಿಸಿವೆ.
ವ್ಯಾಕ್ಸಿನ್ ಹಾಕಿಯೂ ಸೋಂಕು ಇಷ್ಟೊಂದು ಹರಡುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ. ಏ.21ರಂದು ರಾಜ್ಯ ಸರ್ಕಾರ ಜನತಾ ಕರ್ಪ್ಯೂ ಜಾರಿಗೊಳಿಸಿದ ನಂತರ ಸೋಂಕಿತರು ಹಾಗೂ ಮೃತರ ಸಂಖ್ಯೆ ಏರುತ್ತಲೇ ಹೊರಟಿದೆ. ಏಪ್ರಿಲ್ 20ರ ಮೊದಲು ಪ್ರತಿ ದಿನ 200ರ ಗಡಿಯೊಳಗೆ ಇರುತ್ತಿದ್ದ ಸೋಂಕಿತರ ಸಂಖ್ಯೆ ಈಗ 703 ದಾಟುತ್ತಿದೆ. ಈ ಮಧ್ಯೆ ಸೋಂಕಿತರಲ್ಲಿ ಗಂಭೀರ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದ್ದು, 23 ದಿನಗಳ ಹಿಂದೆ ಐಸಿಯುನಲ್ಲಿ ಬರೀ 25 ಜನ ಚಿಕಿತ್ಸೆ ಪಡೆಯುತ್ತಿದ್ದು, ಈಗ 122ರ ಸಂಖ್ಯೆ ತಲುಪಿದೆ.
ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಮೀಸಲಿಟ್ಟದ್ದ ಶೇ. 50ರಷ್ಟು ಬೆಡ್‌ಗಳು ಭರ್ತಿ ಆಗಿದ್ದು, ಮುಂಬರುವ ದಿನಗಳಲ್ಲಿ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದಂತಹ ಪರಿಸ್ಥಿತಿ ಎದುರಾದರೂ ಅಚ್ಚರಿಪಡಬೇಕಿಲ್ಲ. ಧಾರವಾಡ ಜಿಲ್ಲೆಯಲ್ಲಿ 3751 ಸಕ್ರಿಯ ಪ್ರಕರಣಗಳಿವೆ, 2020 ಏಪ್ರಿಲ್- 2021 ಏಪ್ರಿಲ್ವರೆಗೆ 703 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಕಳೆದ 15 ದಿನಗಳಿಂದ ಪ್ರತಿ ದಿನ 5 ರಿಂದ 6 ಜನರು ಕೋವಿಡ್‌ನಿಂದ ಸಾವನ್ನಪ್ಪುತ್ತಿದ್ದಾರೆ.