ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ಇಳಿದಿದ್ದ ಎಸ್.ಡಿ.ಪಿ.ಐ ಸಂಘಟನೆಯ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿಯೂ ಕೂಡ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಹುಬ್ಬಳ್ಳಿಗೆ ಅಮಿತ್ ಶಾ ಬರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಸಿದ್ದತೆ ನಡೆಸುತ್ತಿದ್ದು, 15ಕ್ಕೂ ಹೆಚ್ಚು ಎಸ್‌ಡಿಪಿಐ ಸಂಘಟನೆಯ ಕಾರ್ಯಕರ್ತರನ್ನು ಕಸಬಾ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಮಾವೇಶದ ಹಿನ್ನೆಲೆಯಲ್ಲಿ ಹಾಗೂ ಎಸ್.ಡಿ.ಪಿ.ಐ ಸಂಘಟನೆಗಳು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಮುಂಜಾಗ್ರತೆ ವಹಿಸಲಾಗಿದೆ.
ಇರ್ಷಾದ್ ಅಹಮ್ಮದ್ ಅತ್ತಾರ, ಖಾಜೆಸಾಬ್ ಕುಮದೂರ, ಅಬ್ದುಲ್ ಕಲೀಲ್ ಜಂಧಿ (ಈ ಹಿಂದೆ ಪಿ.ಎಫ್.ಐ) ಎಂಬುವವರನ್ನು ಕಸಬಾ ಪೊಲೀಸ್ ಠಾಣೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.