ಹುಬ್ಬಳ್ಳಿ: ಅನುರಾಗ್ ಸಿಂಗ್ ಠಾಕೂರ್ ವಿರುದ್ಧ ದೂರು ದಾಖಲಿಸಬೇಕು. ಇಲ್ಲವಾದರೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂವಿಧಾನ ಸುರಕ್ಷತಾ ಸಮಿತಿಯ ಅಧ್ಯಕ್ಷ ಪಿತಾಂಬ್ರಪ್ಪ ಬಿಳಾರ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯಿದೆ ಜಾರಿಗೆ ತಂದಿರುವುದನ್ನು ಖಂಡಿಸಿ ದೇಶದಾದ್ಯಂತ ಕಳೆದ ಎರಡು ತಿಂಗಳಿಂದ ಬೃಹತ್ ಪ್ರಮಾಣದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಸಾರ್ವಜನಿಕ ಸಭೆಯಲ್ಲಿ "ದೇಶ ಕೆ ಗದ್ದಾರೋಂಕೋ ಗೋಲಿ ಮಾರೋ ಸಾಲೋಂಕೋ" ಎಂಬ ಅಸಾಂವಿಧಾನಿಕ ಶಬ್ದ ಬಳಸಿದ್ದಾರೆ. ಈ ಹಿನ್ನೆಲೆ ದೂರು ದಾಖಲು ಮಾಡಿಕೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.
ಫೆ.3 ರಂದು ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ಅನುರಾಗ್ ಠಾಕೂರ್ ಮೇಲೆ ಐಪಿಸಿ ಸೆಕ್ಷನ್ 153 ಎ, 124, 34 ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಸಂವಿಧಾನ ಸುರಕ್ಷತಾ ಸಮಿತಿಯ ವತಿಯಿಂದ ಲಿಖಿತ ದೂರು ನೀಡಿದರೂ ಸಹಿತ ಠಾಣೆಯ ಇನ್ಸ್‌ಪೆಕ್ಟರ್ ರಾಜಕೀಯ ಒತ್ತಡಕ್ಕೆ ಮಣಿದು ಎಫ್‌ಐಆರ್ ದಾಖಲಿಸಿಕೊಳ್ಳದಿರುವುದು ಖಂಡನೀಯ ಎಂದು ಆರೋಪಿಸಿದರು.