ಹುಬ್ಬಳ್ಳಿ: ಸತತವಾಗಿ ಸುರಿದ ಮಳೆಯಿಂದಾಗಿ ರಾಜ್ಯದ 22ಕ್ಕೂ ಅಧಿಕ ಜಿಲ್ಲೆಗಳು ನೆರೆ ಹಾವಳಿಗೆ ತತ್ತರಿಸಿದ್ದವು. ವರುಣನ ಆರ್ಭಟಕ್ಕೆ ಅನೇಕ ಜನ ಪ್ರಾಣ ಕಳೆದುಕೊಂಡರು. ಇಂತಹ ಪ್ರವಾಹದ ಭೀಕರತೆ ಹಾಗು ನೆರೆ ಸಂತ್ರಸ್ಥರ ಪರಿಸ್ಥಿತಿಯನ್ನು ಪ್ರಾಣದ ಹಂಗು ತೊರೆದು ಸೆರೆಹಿಡಿದ ಛಾಯಾಗ್ರಾಹಕರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಇಂದಿರಾ ಗಾಜಿನ ಮನೆಯಲ್ಲಿ ಛಾಯಾ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.
ತುತ್ತು ಅನ್ನಕ್ಕಾಗಿ ಅಂಗಲಾಚಿದ, ಮಳೆಯಲ್ಲಿ ಕೊಚ್ಚಿ ಹೋದ ಬೆಳೆಗಳು, ಮಕ್ಕಳ ಗೋಳಾಟ, ನೆರೆಯಿಂದ ಮುಳುಗಿರುವ ಗ್ರಾಮಗಳು.. ಹೀಗೆ ಹತ್ತು ಹಲವು ದಯನೀಯ ಘಟನೆಗಳ ಛಾಯಾಚಿತ್ರಗಳು ವೀಕ್ಷಕರ ಗಮನ ಸೆಳೆದವು.
ಬೆಳಗಾವಿ, ಹಾವೇರಿ, ಗದಗ, ಬಳ್ಳಾರಿ, ಬಿಜಾಪುರ, ಬಾಗಲಕೋಟೆ ಸೇರಿದಂತೆ ಒಟ್ಟು 9 ಜಿಲ್ಲೆಗಳ 40ಕ್ಕೂ ಅಧಿಕ ಪತ್ರಿಕಾ ಛಾಯಾಗ್ರಾಹಕರ 200ಕ್ಕೂ ಅಧಿಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.