ಹುಬ್ಬಳ್ಳಿ: ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಒಪ್ಪಿಸಿದ್ದನ್ನು ಸ್ವಾಗತಿಸುತ್ತೇನೆ. ಆದ್ರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರದಲ್ಲಿರುವುದರಿಂದ ತನಿಖೆಯ ಬಗ್ಗೆ ನಂಬಿಕೆಯಿಲ್ಲ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ವಿಚಾರವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಅಧಕಾರವಿದೆ ಎಂಬ ಉದ್ದೇಶದಿಂದ ಸಿಬಿಐಗೆ ಒಪ್ಪಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ನಡೆಸಬಾರದು. ಒಂದು ವೇಳೆ ಏಕಪಕ್ಷೀಯ ತನಿಖೆ ನಡೆಸುವುದಾದರೆ ಸಿಬಿಐಗೆ ಪ್ರಕರಣವನ್ನು ವಹಿಸಬಾರದು. ರಾಜ್ಯದಲ್ಲಿ ಹಲವಾರು ತನಿಖಾ ತಂಡಗಳಿದ್ದು, ಅವುಗಳಿಂದ ತನಿಖೆ ಮಾಡಿಸಬೇಕು. ಇದೀಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದು, ಅದು ತನಿಖೆ ಪೂರ್ಣಗೊಳಿಸಿ ಫಲಿತಾಂಶ ಬರುವವರಿಗೆ ಕಾದು ನೋಡೋಣ ಎಂದರು.
ಫೋನ್ ಕದ್ದಾಲಿಕೆ ಕುಮಾರಸ್ವಾಮಿ ಸರ್ಕಾರದಲ್ಲಿ ಅಷ್ಟೇ ಅಲ್ಲದೇ ಕಳೆದ ಬಿಜೆಪಿ ಸರ್ಕಾರದಲ್ಲಿಯೂ ಅಗಿತ್ತು. ಅವುಗಳನ್ನು ಸಿಬಿಐಗೆ ಒಪ್ಪಿಸಬೇಕು. ಅಲ್ಲದೇ ಈ ಪ್ರಕರಣಗಳಾದಾಗ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಅಶೋಕ್ ಸುಮ್ಮನೆ ಕುಳಿತಿದ್ದರು. ಬಿಜೆಪಿಯ ಫೋನ್ ಕದ್ದಾಲಿಕೆ ಮಾಡಿದರೆ ಆಪರೇಷನ್ ಕಮಲದ ವಿಷಯ ಹೊರಗೆ ಬರುತ್ತದೆ. ಇತ್ತೀಚೆಗೆ ರಾಜಕಾರಣ ಹೊಲಸಾಗಿದೆ. ಒಮ್ಮೆಯಾದರೂ ಸತ್ಯ ಹೊರಗೆ ಬರಬೇಕು. ದೇಶಕ್ಕೆ ಮತ್ತು ರಾಜ್ಯಕ್ಕೆ ಗಂಡಾಂತರ ಎದುರಾದಾಗ ಫೋನ್ ಟ್ಯಾಪಿಂಗ್ ಮಾಡಲು ಸಿಎಂಗೆ ಅಧಿಕಾರವಿದೆ. ಈ ರೀತಿ ಮಾಡಿದ್ರೆ ಸಿಬಿಐ ಜೈಲಿಗೆ ಹಾಕುತ್ತಾ ಎಂದು ಹೊರಟ್ಟಿ ಪ್ರಶ್ನಿಸಿದರು.
ರಾಜ್ಯದಲ್ಲಿನ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ತೋಳ ಬಂತು ತೋಳ ಎಂಬಂತೆ ಆಗಬಾರದು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ದೇಶದ ಹಲವಾರು ವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ. ಅವರು ಈ ಬಗ್ಗೆ ಗಮನಹರಿಸಿ ಇದನ್ನು ಸ್ವಚ್ಛ ಮಾಡಲಿ. ಅದನ್ನು ಬಿಟ್ಟು ಸುಖಾ ಸುಮ್ಮನೆ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಹೊರಟ್ಟಿ ಸಮರ್ಥಿಸಿಕೊಂಡರು.