ಧಾರವಾಡ: ಜೂನ್ 25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಕೆಎನ್‍ಕೆ ಶಾಲೆಯ ವಿದ್ಯಾರ್ಥಿನಿ ತಬಸೂಮ್ ಸತತವಾಗಿ ಎರಡು ಪರೀಕ್ಷೆಗಳಿಗೆ ಗೈರು ಹಾಜರಾಗಿದ್ದಳು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ಹಂಚಾಟೆ ಅವರು ಖುದ್ದಾಗಿ ಬಾಲಕಿಯ ಪಾಲಕರ ಮನವೊಲಿಸಿ ಇಂದು ನಡೆದ ವಿಜ್ಞಾನ ಪರೀಕ್ಷೆಗೆ ಹಾಜರಾಗಲು ಧೈರ್ಯ ತುಂಬಿದರು.
ಪರೀಕ್ಷಾ ಕೇಂದ್ರ ಕರ್ನಾಟಕ ಪ್ರೌಢ ಶಾಲೆಯಲ್ಲಿ ಮಗುವಿಗೆ ಪುಷ್ಪ ನೀಡಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ತಂಡದಲ್ಲಿ ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ವಿ. ಅಡಿವೇರ, ಬಿಆರ್ಪಿ ಫಿರೋಜ ಗುಡೇನಕಟ್ಟಿ, ಪೊಲೀಸರಾದ ಅನೀಲ್ ಕೋತ್ ಇವರು ಮಗುವನ್ನು ಪರೀಕ್ಷಾ ಕೇಂದ್ರ ಕರ್ನಾಟಕ ಪ್ರೌಢ ಶಾಲೆಯ ಮುಖ್ಯ ಅಧೀಕ್ಷಕರಾದ ಸವಣೂರರವರಿಗೆ ಭೇಟಿ ಮಾಡಿಸಿ, ಮಗುವಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನ್ ಮಾಡಿಸಿ, ನಿಗದಿತ ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿಸಿದರು.
![ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮನವೊಲಿಕೆ](https://etvbharatimages.akamaized.net/etvbharat/prod-images/kn-dwd-7-sslc-exam-student-attend-av-ka10001_29062020193533_2906f_1593439533_713.jpg)
ಎರಡನೇ ತಂಡದಲ್ಲಿ ಧಾರವಾಡ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ನೇತೃತ್ವದಲ್ಲಿ ಜಿಹೆಚ್‍ಎಸ್ ಕೋಟೂರಿನ ರೇವಣ್ಣಾ ಹರಿಜನ ಮತ್ತು ಅಳ್ನಾವರದ ಮಿಲತ್ ಪ್ರೌಢಶಾಲೆಯ ವಿದ್ಯಾವತಿ ಕುರುಬೆಟ್ಟ ಈ ಮಕ್ಕಳನ್ನು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಸರಕಾರಿ ವಾಹನದಲ್ಲಿ ಕರೆತಂದು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಹಾಜರು ಪಡಿಸಿದರು. ತಂಡದಲ್ಲಿ ಸುರಕ್ಷಾಪಡೆ ಮುಖ್ಯಸ್ಥರಾದ ಕೆ.ಎಂ. ಶೇಖ ಹಾಗೂ ಬಿಆರ್ಪಿ ಸತ್ತೂರ ಹಾಜರಿದ್ದರು. ಜಿಲ್ಲೆಯಲ್ಲಿ ಯಾವುದೇ ಮಗು ಪರೀಕ್ಷೆಯಿಂದ ವಂಚಿತವಾಗದಂತೆ ಗೈರಾದ ಮಕ್ಕಳ ಮನವೊಲಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಉಪನಿರ್ದೇಶಕರು ಕರೆ ನೀಡಿದ್ದಾರೆ.