ಹುಬ್ಬಳ್ಳಿ: ರಸ್ತೆ ಮಾಡೋದಕ್ಕೆ ಕೋಟಿ ಕೋಟಿ ಸುರಿಯೋದನ್ನ ಕಂಡಿದ್ದೇವೆ. ಆದ್ರೆ, ಈ ಪಾಲಿಕೆ ಮಾತ್ರ ನಗರದ ರಸ್ತೆಗಳ ಗುಂಡಿ ಮುಚ್ಚೋಕೆ ಕೋಟಿ ಕೋಟಿ ವೆಚ್ಚ ಮಾಡುತ್ತಿದೆ ಎನ್ನುವುದು ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನೊಂದೆಡೆ ಅದು ಎಷ್ಟರ ಮಟ್ಟಿಗೆ ನಿಜ ಅನ್ನೊ ಪ್ರಶ್ನೆಯೂ ಮೂಡಿದೆ.
ಹೌದು, ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಹಾಳಾಗಿರುವ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ರಸ್ತೆ ಗುಂಡಿಗಳನ್ನ ಮುಚ್ಚುವುದಕ್ಕೆ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ. ದುರಸ್ತಿಗೆ ಖರ್ಚಾಗುವ ಒಟ್ಟು ಮೊತ್ತ 3 ಕೋಟಿ ರೂಪಾಯಿಯಂತೆ ಇಷ್ಟೊಂದು ಹಣವನ್ನ ರಸ್ತೆ ನಿರ್ಮಾಣಕ್ಕೂ ಖರ್ಚು ಮಾಡಿರಲಿಲ್ಲ ಎಂಬುದು ಸ್ಥಳೀಯರ ವಾದವಾಗಿದೆ.
ನಗರದಲ್ಲಿ ಮಳೆ ಸುರಿದು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದೇ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಬ್ಬದೂಟವಾದಂತಿದೆ. ಗುಂಡಿ ಮುಚ್ಚುವುದಾಗಿ ಹೇಳಿ ಮೂರು ಕೋಟಿಗೂ ಹೆಚ್ಚು ಹಣವನ್ನ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಮಣ್ಣು, ಕಡಿ ಹಾಕಿ ಒಂದಷ್ಟು ರಸ್ತೆಗಳಲ್ಲಿ ಗುಂಡಿ ಮುಚ್ಚಲಾಗಿದೆ. ಆದರೆ, ಗುಂಡಿ ಮುಚ್ಚುವ ಕಾರ್ಯ ಕಳಪೆ ಗುಣಮಟ್ಟದಿಂದ ಕೂಡಿದ್ದು, ಎರಡು ದಿನ ಕಳೆಯುವುದರಲ್ಲಿ ಮತ್ತೆ ಅದೇ ಸ್ಥಳದಲ್ಲಿ ಗುಂಡಿಗಳು ಬೀಳುತ್ತಿವೆ. ಹಾಗಾದ್ರೆ ಕೋಟಿ ಕೋಟಿ ಸುರಿದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯವರು ಯಾವ ರೀತಿ ಗುಂಡಿ ಮುಚ್ಚಿದ್ರು? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ರಸ್ತೆ ನಿರ್ಮಾಣಕ್ಕೆ ವೆಚ್ಚವಾಗದಷ್ಟು ಹಣ, ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ವೆಚ್ಚವಾಗುತ್ತಿರುವುದಕ್ಕೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಗುಂಡಿ ಮುಚ್ಚುವ ಬದಲಿಗೆ ಹೊಸ ರಸ್ತೆಯನ್ನೇ ನಿರ್ಮಾಣ ಮಾಡಲಿ. ಗುಂಡಿ ಮುಚ್ಚುವ ಹೆಸರಲ್ಲಿ, ಹಣ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.