ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಧ್ಯೆದ ಬಿಆರ್ಟಿಎಸ್ ಕಾರಿಡಾರ್ ನಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಹೊಸ ಯೋಜನೆ ರೂಪಿಸಿದ್ದಾರೆ. ಈ ಬಾರಿ ಸ್ವಯಂ ಚಾಲಿತ ವಾಹನ ನೋಂದಣಿ ಸಂಖ್ಯೆ ಗುರುತಿಸುವ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಪೊಲೀಸ್ ಇಲಾಖೆಯ ಸಂಚಾರ ನಿರ್ವಹಣಾ ಕೇಂದ್ರದ ಮೂಲಕ, ವಾಹನ ಮಾಲೀಕರ ಮನೆಗೆ ದಂಡದ ನೋಟಿಸ್ ರವಾನಿಸಿ ಬಿಸಿ ಮುಟ್ಟಿಸಲು ಮುಂದಾಗಿದೆ.
ಈಗಾಗಲೇ ಹು-ಧಾ ನಡುವೆ ತ್ವರಿತ ಸಾರಿಗೆ ನೀಡಬೇಕು ಎಂಬ ಉದ್ದೇಶದಿಂದ ಹೊಸೂರು ಸರ್ಕಲ್ದಿಂದ ಧಾರವಾಡದ ಜ್ಯುಬ್ಲಿ ಸರ್ಕಲ್ ವರೆಗೆ ಬಿಆರ್ಟಿಎಸ್ ಪ್ರತ್ಯೇಕ ಕಾರಿಡಾರ್ ನಿರ್ಮಿಸಲಾಗಿದೆ. ಇಲ್ಲಿ ಚಿಗರಿ ಬಸ್ಗಳು, ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿಧಿಸಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕಾರಿಡಾರ್ ಪ್ರವೇಶಿಸದಂತೆ ಅಲ್ಲಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿದ್ದರೂ ಕೂಡಾ ಕಡಿವಾಣ ಬಿದ್ದಿರಲಿಲ್ಲ. ಹೀಗಾಗಿ ಇದೀಗ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಅಪಘಾತವಾದರೆ ಅವರೇ ಹೊಣೆ: ಅನಗತ್ಯ ವಾಹನಗಳಿಗೆ ಪ್ರವೇಶಕ್ಕೆ ಕಡಿವಾಣ ಹಾಕಲು ಸ್ಮಾರ್ಟ್ ಸಿಟಿ ವತಿಯಿಂದ ಕಾರಿಡಾರ್ ಉದ್ದಕ್ಕೂ ಸ್ವಯಂ ಚಾಲಿತ ಬೂಂ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಚಿಗರಿ ಬಸ್, ತುರ್ತು ಸೇವೆಯ ವಾಹನಗಳಿಗೆ ಟ್ಯಾಗ್ ವಿತರಿಸಲಾಗಿದೆ. ಕಾರಿಡಾರ್ನಲ್ಲಿ ನಿಯಮ ಉಲ್ಲಂಘಿಸಿ ಪ್ರವೇಶಿಸುವ ವಾಹನಗಳಿಗೆ ಮೊದಲು 500 ರೂ ದಂಡ ವಿಧಿಸಲಾಗುತ್ತಿದೆ.
ನಿಯಮ ಉಲ್ಲಂಘಿಸಿ ಕಾರಿಡಾರ್ ಪ್ರವೇಶಿಸುವ ವಾಹನಗಳಿಂದ ಅಪಘಾತ ಸಂಭವಿಸಿದರೇ ಅದಕ್ಕೆ ಖಾಸಗಿ ವಾಹನ ಸವಾರರೇ ನೇರ ಹೊಣೆಗಾರರನ್ನಾಗಿಸುತ್ತಿದೆ. ಇದಕ್ಕೆ ಈಗಾಗಲೇ ನಿಯಮ ಉಲ್ಲಂಘನೆ ತಡೆ ಹಾಗೂ ಪತ್ತೆಗಾಗಿ ಅತ್ಯಾಧುನಿಕ ಸ್ವಯಂಚಾಲಿತವಾಗಿ ವಾಹನಗಳ ನೋಂದಣಿ ಸಂಖ್ಯೆ ಗುರುತಿಸುವ ವಿಶೇಷ ಕ್ಯಾಮರಾಗಳನ್ನು ಅಳವಡಿಸಿ ಕಾರಿಡಾರ್ ಪ್ರವೇಶಿಸಿದ ವಾಹನಗಳ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅತ್ಯಾಧುನಿಕ ಕ್ಯಾಮರಾ ಅಳವಡಿಕೆ: ಕಾರಿಡಾರ್ ಉದ್ದಕ್ಕೂ ವಿವಿಧ ಮಾದರಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 47 ಪಿಡಿಜೆಡ್, 128 ಡೋಮ್ ಕ್ಯಾಮರಾ, ಅನಗತ್ಯ ವಾಹನ ಪತ್ತೆಗಾಗಿ ವಾಹನಗಳ ನೋಂದಣಿ ಸಂಖ್ಯೆ ಗುರುತಿಸುವ 20 ಎಎನ್ಪಿ ಆರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಇವು ಒಂದು ಕಿಮೀ ದೂರದ ವಾಹನಗಳ ನೋಂದಣಿ ಸಂಖ್ಯೆ ವಾಹನ ಸವಾರರ ಭಾವಚಿತ್ರ ಸೆರೆಹಿಡಿಯುತ್ತವೆ. ಇದು ಕ್ಲಿಕ್ಕಿಸಿದ ಫೋಟೋ ನೇರವಾಗಿ ಬಿಆರ್ಟಿಎಸ್ ಕಂಟ್ರೋಲ್ ಕೊಠಡಿಗೆ ರವಾನೆಯಾಗಲಿದೆ.
ಇಲ್ಲಿರುವ ಮಾಹಿತಿಯನ್ನು ಉಪನಗರ ಠಾಣೆಯ ಮೇಲಿರುವ ಪೊಲೀಸ್ ಇಲಾಖೆಯ ಸಂಚಾರ ನಿರ್ವಹಣೆ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಫೋಟೋಗಳ ಆಧಾರದ ಮೇಲೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ ಇಂದಿಗೆ ವರ್ಷ..